ಮ್ಯಾನ್ಮಾರ್: ಆಂಗ್ಸಾನ್ ಸೂಕಿಗೆ 5 ವರ್ಷ ಜೈಲುಶಿಕ್ಷೆ

Update: 2022-04-27 18:45 GMT

ಯಾಂಗಾನ್, ಎ.27: ಮ್ಯಾನ್ಮಾರ್ ಪದಚ್ಯುತ ನಾಯಕಿ ಆಂಗ್ಸಾನ್ ಸೂಕಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಸಾಬೀತಾಗಿದ್ದು ಅವರಿಗೆ 5 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಮ್ಯಾನ್ಮಾರ್ ನ್ಯಾಯಾಲಯ ಬುಧವಾರ ಘೋಷಿಸಿದೆ. ಸೂಕಿ ವಿರುದ್ಧ ದಾಖಲಿಸಿರುವ 11 ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಥಮ ಪ್ರಕರಣದಲ್ಲಿ ಅವರು ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದೆ.


 ಯಾಂಗಾನ್ನ ಮಾಜಿ ಮುಖ್ಯಸ್ಥರಿಂದ ಚಿನ್ನದ ಗಟ್ಟಿ ಮತ್ತು ನಗದಿನ ರೂಪದಲ್ಲಿ 4.59 ಕೋಟಿ ರೂ.ಗೂ ಅಧಿಕ ಮೊತ್ತದ ಲಂಚವನ್ನು ಪಡೆದಿರುವ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವುದರಿಂದ ಈ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕಾನೂನು ಬಾಹಿರವಾಗಿ ವಾಕಿಟಾಕಿ ಆಮದು ಮಾಡಿಕೊಂಡಿರುವುದು, ಕೋವಿಡ್ ನಿರ್ಬಂಧ ಉಲ್ಲಂಘನೆ ಮತ್ತು ದೇಶದ್ರೋಹ ಪ್ರಕರಣದಲ್ಲಿ ಸೂಕಿಗೆ ಈ ಹಿಂದೆ 6 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ. ಇದರೊಂದಿಗೆ 2 ಪ್ರಕರಣದಲ್ಲಿ ಅವರಿಗೆ ಒಟ್ಟು 11 ವರ್ಷದ ಜೈಲುಶಿಕ್ಷೆಯಾಗಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸೂಕಿಯ ವಕೀಲರು ಹೇಳಿದ್ದಾರೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಇನ್ನೂ 10 ಪ್ರಕರಣ ಸೂಕಿ ವಿರುದ್ಧ ದಾಖಲಾಗಿದ್ದು ಅದರ ವಿಚಾರಣೆ ನಡೆಯಬೇಕಿದೆ. ಸೂಕಿಯವರನ್ನು ಭೇಟಿಯಾಗಲು ತಮಗೆ ಅವಕಾಶ ನೀಡಿಲ್ಲ ಎಂದು ಅವರ ವಕೀಲರು ಮಾಧ್ಯಮದವರಿಗೆ ತಿಳಿಸಿದ್ದಾರೆ. ಬುಧವಾರ ನಡೆದ ಕೋರ್ಟ್ ಕಲಾಪಕ್ಕೆ ಮಾಧ್ಯಮದವರಿಗೆ ಪ್ರವೇಶ ಇರಲಿಲ್ಲ. 2021ರಲ್ಲಿ ಮ್ಯಾನ್ಮಾರ್ ಸೇನೆ ಕ್ಷಿಪ್ರಕ್ರಾಂತಿಯ ಮೂಲಕ ಸೂಕಿ ಸರಕಾರವನ್ನು ಪದಚ್ಯುತಗೊಳಿಸಿ ಆಡಳಿತವನ್ನು ಕೈಗೆತ್ತಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News