ವೆಸ್ಟ್ ಬ್ಯಾಂಕ್: ಇಸ್ರೇಲ್ ನ ಹೊಸ ಕಾಯ್ದೆಗೆ ವ್ಯಾಪಕ ಆಕ್ರೋಶ
ಜೆರುಸಲೇಂ, ಎ.27: ಆಕ್ರಮಿತ ವೆಸ್ಟ್ ಬ್ಯಾಂಕ್ (ಪಶ್ಚಿಮ ದಂಡೆ ) ಪ್ರದೇಶದಲ್ಲಿ ವಿದೇಶೀಯರ ಪ್ರವೇಶ ಮತ್ತು ನಿವಾಸಕ್ಕೆ ಸಂಬಂಧಿಸಿ ಇಸ್ರೇಲ್ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಕಾನೂನಿನ ಬಗ್ಗೆ ಪೆಲೆಸ್ತೀನ್ ಕಾನೂನು ತಜ್ಞರು, ಶಿಕ್ಷಣ ತಜ್ಞರು ಮತ್ತು ಡಿಜಿಟಲ್ ಹಕ್ಕುಗಳ ಸಂಸ್ಥೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 22ರಿಂದ ಅನುಷ್ಟಾನವಾಗಲಿರುವ ಹೊಸ ಕಾನೂನಿನ ಅಂಶಗಳ ಬಗ್ಗೆ ಫೆಬ್ರವರಿಯಲ್ಲಿಯೇ ಅಧಿಸೂಚನೆ ಹೊರಡಿಸಿದ್ದರೂ ಆಗ ಈ ಬಗ್ಗೆ ಯಾರೂ ಹೆಚ್ಚಿನ ಗಮನ ನೀಡಿರಲಿಲ್ಲ. ಹೊಸ ಕಾನೂನಿನಲ್ಲಿ ವಿದೇಶಿಯರ ಪ್ರವೇಶಕ್ಕೆ ಸಂಬಂಧಿಸಿ ವಿಸ್ತಾರವಾದ ನಿಯಮವಿದೆ. ಚಲನವಲನಕ್ಕೆ ಸಂಬಂಧಿಸಿದ ನಿಯಮವನ್ನು ಹೊಸ ಕಾನೂನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ ಮತ್ತು ಈಗಾಗಲೇ ಕಠಿಣಗೊಂಡಿರುವ ವ್ಯವಸ್ಥೆಗೆ ಇನ್ನಷ್ಟು ನಿರ್ಬಂಧದ ಸೇರ್ಪಡೆಯಾಗಲಿದೆ .
ಆಕ್ರಮಿತ ಪೆಲೆಸ್ತೀನಿಯನ್ ಪ್ರದೇಶದಲ್ಲಿ ವಿದೇಶಿಯರ ಪ್ರಯಾಣವನ್ನು ನಿರ್ಬಂಧಿಸುವ ಮತ್ತು ಪ್ರಯಾಣದ ಜಾಡು ಪತ್ತೆಹಚ್ಚುವ ಪ್ರಯತ್ನ ಇದಾಗಿದೆ. ಅಲ್ಲದೆ ಪೆಲೆಸ್ತೀನ್ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ಮತ್ತು ವಿದೇಶಿ ರಾಷ್ಟ್ರೀಯತೆಯನ್ನು ಹೊಂದಿರುವ ಪೆಲೆಸ್ತೀನಿಯರ ಭೂಮಿ ಒಡೆತನದ ಕುರಿತ ಅಂಕಿಅಂಶ ಸಂಗ್ರಹಿಸುವ ಉದ್ದೇಶದ ಕಾನೂನು ಇದಾಗಿದೆ ಎಂದು ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.