×
Ad

ಅಮೆರಿಕದಲ್ಲಿ ಶೂಟೌಟ್ : ನಾಲ್ಕು ಮಂದಿ ಮೃತ್ಯು

Update: 2022-04-28 07:18 IST

ವಾಷಿಂಗ್ಟನ್: ಮಿಸಿಸಿಪ್ಪಿಯ ಗಲ್ಫ್‌ ಕೋಸ್ಟ್‌ ನ ಮೋಟೆಲ್ ಒಂದರಲ್ಲಿ ನಡೆದ ಶೂಟೌಟ್‍ನಲ್ಲಿ ಮೋಟೆಲ್ ಮಾಲಕ ಹಾಗೂ ಇಬ್ಬರು ಉದ್ಯೋಗಿಗಳು ಸೇರಿದಂತೆ ನಾಲ್ಕು ಮಂದಿ ಹತ್ಯೆಗೀಡಾಗಿದ್ದಾರೆ.

ಬಳಿಕ ಪೊಲೀಸರ ಜತೆ ನಡೆದ ಸಂಘರ್ಷದಲ್ಲಿ ಹಂತಕ ಕೂಡಾ ಹತನಾಗಿದ್ದಾನೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು 32 ವರ್ಷದ ಜೆರೆಮಿ ಅಲೆಸಂಡೆರ್ ರೆನಾಲ್ಡ್ ಎಂದು ಗುರುತಿಸಲಾಗಿದೆ.‌

ಹಂತಕ ದಾಳಿ ನಡೆಸಿದ ಸ್ಥಳದಿಂದ ಕಳವು ಮಾಡಿದ ವಾಹನದಲ್ಲಿ ಪರಾರಿಯಾಗಿದ್ದು, ಆತನನ್ನು ಕನ್ವೀನಿಯನ್ಸ್ ಸ್ಟೋರ್ ಒಂದರಲ್ಲಿ ಪತ್ತೆ ಮಾಡಲಾಯಿತು ಎಂದು ಗಲ್ಫ್ ಪೋರ್ಟ್ ಪೊಲೀಸ್ ಇಲಾಖೆ ಮುಖ್ಯಸ್ಥ ಆಡಮ್ ಕೂಪರ್ ಹೇಳಿದ್ದಾರೆ. ಬ್ರಾಡ್ವೇ ಇನ್ ಎ‌ಕ್ಸ್ ಪ್ರೆಸ್ ಮೋಟೆಲ್‍ನಲ್ಲಿ ಈ ದಾಳಿ ನಡೆದಿದೆ.‌

ಮೋಟೆಲ್ ಮಾಲಕ 51 ವರ್ಷದ ಮೊಹ್ಮದ್ ಮೊಯೇನಿ, ಉದ್ಯೋಗಿಗಳಾದ ಲಾರಾ ಲೆಹ್ಮನ್ ಮತ್ತು ಚಡ್ ಗ್ರೀನ್ ಶೂಟೌಟ್‍ನಲ್ಲಿ ಹತ್ಯೆಯಾಗಿದ್ದಾರೆ. ಮೋಟೆಲ್‍ ನಲ್ಲಿ ಉಂಟಾದ ಕೋಲಾಹಲದಿಂದ ಜನ ಚಲ್ಲಾಪಿಲ್ಲಿಯಾಗಿ ಚದುರಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ಮೋಟೆಲ್ ಶೂಟೌಟ್ ಬಳಿಕ ಕಾರ್ ಜ್ಯಾಕಿಂಗ್ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಗೆ ಗುಂಡು ಹೊಡೆಯಲಾಗಿದೆ. ಆತ ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟಿರುವುದಾಗಿ ಪೊಲೀಸರು ವಿವರಿಸಿದ್ದಾರೆ. ಹಂತಕ ಅಡಗಿಕೊಂಡಿದ್ದ ಅಂಗಡಿಯಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿದರು. ಪೊಲೀಸರು ನಡೆಸಿದ ಸಂಧಾನ ಪ್ರಯತ್ನ ವಿಫಲವಾಗಿ ದಾಳಿ ಮಾಡಿದಾಗ, ಆತ ಮೃತಪಟ್ಟಿರುವುದು ಪತ್ತೆಯಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News