×
Ad

ಐಪಿಎಲ್: ಜಾನ್ಸನ್ ಬೌಲಿಂಗ್ ನಲ್ಲಿ ರಶೀದ್ ಖಾನ್ ಸಿಕ್ಸರ್ ಸಿಡಿಸಿದಾಗ ತಾಳ್ಮೆ ಕಳೆದುಕೊಂಡ ಮುರಳೀಧರನ್

Update: 2022-04-28 13:03 IST
Photo:twitter

ಮುಂಬೈ: ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್  ಮಾರ್ಕೊ ಜಾನ್ಸನ್ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಎಸೆದ  ಕೊನೆಯ ಓವರ್‌ನಲ್ಲಿ ರಶೀದ್ ಖಾನ್ ಹಾಗೂ  ರಾಹುಲ್ ತೆವಾಟಿಯಾ ಅವರು 4 ಸಿಕ್ಸರ್ ಗಳನ್ನು ಒಳಗೊಂಡ 25 ರನ್ ಗಳಿಸಿ ಗುಜರಾತ್ ಟೈಟಾನ್ಸ್ ಗೆ ಕೊನೆಯ ಓವರ್ ನಲ್ಲಿ ಗೆಲುವು ತಂದುಕೊಟ್ಟರು. ಜಾನ್ಸನ್  ಅವರು ತೆವಾಟಿಯಾ-ರಶೀದ್ ರಿಂದ ದಂಡನೆಗೆ ಒಳಗಾದಾಗ ಹೈದರಾಬಾದ್ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ತಾಳ್ಮೆಯನ್ನು ಕಳೆದುಕೊಂಡು ಆಕ್ರೋಶ ಹೊರ ಹಾಕಿದ್ದು ಕಂಡುಬಂತು. ಮುರಳಿಯ ಈ ಪ್ರತಿಕ್ರಿಯೆ ಟ್ವಿಟರ್ ನಲ್ಲಿ ಚರ್ಚೆಗೆ ಕಾರಣವಾಗಿದೆ.

ಗುಜರಾತ್ ಗೆ  ಗೆಲ್ಲಲು ಅಂತಿಮ ಆರು ಎಸೆತಗಳಲ್ಲಿ 22 ರನ್‌ಗಳ ಅಗತ್ಯವಿತ್ತು.  ಜಾನ್ಸನ್ ಅವರ ಮೊದಲ ಎಸೆತವನ್ನೇ ತೆವಾಟಿಯಾ  ಸಿಕ್ಸರ್ ಗೆ ಸಿಡಿಸಿ  ಸ್ವಾಗತಿಸಿದರು. ಜಾನ್ಸನ್ ಎರಡನೆಯ ಎಸೆತದಲ್ಲಿ ಒಂದೇ ಒಂದು ರನ್ ನೀಡಿದರು. ಆದಾಗ್ಯೂ, ರಶೀದ್ ನಂತರದ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿ ಗುಜರಾತ್ ತಂಡಕ್ಕೆ ರೋಮಾಂಚಕ ವಿಜಯವನ್ನು ತಂದರು.

ಜಾನ್ಸನ್  ವಿರುದ್ಧ ರಶೀದ್ ಸಿಕ್ಸರ್ ಸಿಡಿಸುತ್ತಿದ್ದಂತೆ, ಶ್ರೀಲಂಕಾದ ಮಾಜಿ ದಂತಕತೆ ಹಾಗೂ ಹೈದರಾಬಾದ್ ನ  ಸ್ಪಿನ್ ಬೌಲಿಂಗ್ ತರಬೇತುದಾರ ಮುತ್ತಯ್ಯ ಮುರಳೀಧರನ್ ಆಕ್ರೋಶಗೊಂಡು, ತಾಳ್ಮೆಯನ್ನು ಕಳೆದುಕೊಂಡರು. ಸದಾ ಶಾಂತವಾಗಿರುವ ಮುರಳೀಧರನ್  ತಾಳ್ಮೆ ಕಳೆದುಕೊಂಡಿರುವ ದೃಶ್ಯವು  ಕ್ಯಾಮರಾದಲ್ಲಿ ಸೆರೆಯಾಗಿದೆ.

ಜಾನ್ಸನ್ ತನ್ನ ನಾಲ್ಕು ಓವರ್‌ಗಳ ಬೌಲಿಂಗ್  ನಲ್ಲಿ ಒಂದೂ ವಿಕೆಟ್ ಪಡೆಯದೆ 63 ರನ್‌ ಬಿಟ್ಟುಕೊಟ್ಟರು. ಐಪಿಎಲ್ ನಲ್ಲಿ ಮೊದಲ ಬಾರಿ 5 ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದ ಉಮ್ರಾನ್ ಮಲಿಕ್‌ಗೆ ಅಗತ್ಯವಾದ ಬೆಂಬಲ ನೀಡಲು ವಿಫಲರಾದರು.

ಮಲಿಕ್ (5/25) ಹೊರತುಪಡಿಸಿ, ಬೇರೆ ಯಾವುದೇ ಬೌಲರ್ ಗುಜರಾತ್ ಗೆ ಸವಾಲಾಗಲಿಲ್ಲ. ವಿಶೇಷವಾಗಿ ಡೆತ್ ಓವರ್‌ಗಳಲ್ಲಿ. ಎಡಗೈ ವೇಗಿ ಟಿ. ನಟರಾಜನ್ ಗೆ ಕೂಡ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಹಾಗೂ  ಅವರು  4 ಓವರ್‌ಗಳಲ್ಲಿ 43 ರನ್‌ಗಳನ್ನು ಬಿಟ್ಟುಕೊಟ್ಟರು.

ಐಪಿಎಲ್ 2022 ರಲ್ಲಿ ನಟರಾಜನ್ ಆಡಿರುವ ಎಂಟು ಪಂದ್ಯಗಳಲ್ಲಿ ವಿಕೆಟ್ ಪಡೆಯದೆ ಇರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News