ತೀವ್ರ ಬಿಸಿಲ ಧಗೆ: ಕಾರಿನ ಬಾನೆಟ್‌ ಮೇಲೆ ರೊಟ್ಟಿ ಸುಟ್ಟ ಮಹಿಳೆ; ವಿಡಿಯೋ ವೈರಲ್‌

Update: 2022-04-28 16:13 GMT

ಹೊಸದಿಲ್ಲಿ: ಈ ವರ್ಷದ ಬಿಸಿಲ ಧಗೆ ವಿಪರೀತವಾಗಿದೆ. ಬಹುಷ ಅನೇಕರು, ಈ ತಾಪಮಾನಕ್ಕೆ ಬೆಂಕಿಯೇ ಇಲ್ಲದೆ ಅಡುಗೆ ಮಾಡಬಹುದು ಎಂದು ತಮಾಷೆಗಾಗಿ ಹೇಳಿಕೊಂಡಿರಬಹುದು. ಆದರೆ ಇಲ್ಲೋರ್ವ ಮಹಿಳೆ ಕಾರಿನ ಬಾನೆಟ್‌ ಮೇಲೆ ರೊಟ್ಟಿ ತಯಾರಿಸಿ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ. 

ಸದ್ಯ ಕಾರಿನ ಮೇಲೆ ರೊಟ್ಟಿ ತಯಾರಿಸುವ ಮಹಿಳೆಯ ವಿಡಿಯೋ ವ್ಯಾಪಕ ವೈರಲ್‌ ಆಗಿದ್ದು, ಮೊದಲಿಗೆ ಹಿಟ್ಟನ್ನು ರೋಲ್‌ ಮಾಡಿದ ಬಳಿಕ, ಬಿಸಿಯಾದ ಬಾನೆಟ್‌ ಮೇಲೆ ಹಾಕುತ್ತಾರೆ. ತವಾದಲ್ಲಿ ಸುಟ್ಟ ಹಾಗೆ, ರೊಟ್ಟಿ ಬೇಯುವುದು ವಿಡಿಯೋದಲ್ಲಿ ದಾಖಲಾಗಿದೆ. 

ನಿಲಾಮದಬ್‌ ಪಾಂಡಾ ಎಂಬವರು ಈ ವಿಡಿಯೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದು, ತನ್ನ ಪಟ್ಟಣ ಸೋನೆಪುರ್‌ ದೃಶ್ಯ ಎಂದು ಬರೆದುಕೊಂಡಿದ್ದಾರೆ. ಸೋಮವಾರ ಪೋಸ್ಟ್‌ ಮಾಡಲಾದ ಈ ವಿಡಿಯೋ ಗುರುವಾರದವರೆಗೆ 75 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

ಇದು ಭಾರತ ಉಪಖಂಡದ ಬಿಸಿಲು, ಮೇ ತಿಂಗಳಲ್ಲಿ ನಿಮಗೆ ದಾಲ್‌ ಹಾಗೂ ಸಬ್ಜಿಯನ್ನೂ ಮಾಡಬಹುದು ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಅದಾಗ್ಯೂ, ಈ ವಿಡಿಯೋದ ನಿಜವಾದ ಮೂಲ ಇದುವರೆಗೂ ಧೃಡೀಕರಿಸಲು ಸಾಧ್ಯವಾಗಲಿಲ್ಲ. 

ಈ ವರ್ಷದ ಮಾರ್ಚ್‌ನಲ್ಲಿ ಬೇಸಿಗೆಯ ಆರಂಭದಿಂದಲೂ, ದೇಶದ ಹಲವಾರು ಭಾಗಗಳಲ್ಲಿ ತೀವ್ರವಾದ ಶಾಖದ ಪರಿಸ್ಥಿತಿಗಳು ವರದಿಯಾಗುತ್ತಿವೆ. ಎರಡು ತಿಂಗಳ ಅವಧಿಯಲ್ಲಿ, ಪಶ್ಚಿಮ ರಾಜಸ್ಥಾನ ಮತ್ತು ಮಹಾರಾಷ್ಟ್ರದ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ತನಕ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News