ಮಹಿಳಾ ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಶಾಸಕ ಜಿಗ್ನೇಶ್ ಮೆವಾನಿಗೆ ಜಾಮೀನು

Update: 2022-04-29 10:10 GMT

ಗುವಾಹಟಿ: ಮಹಿಳಾ ಪೊಲೀಸ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಅಸ್ಸಾಂ ನ್ಯಾಯಾಲಯವು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ  ಶುಕ್ರವಾರ ಜಾಮೀನು ಮಂಜೂರು ಮಾಡಿದೆ ಎಂದು NDTV ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ಟ್ವೀಟಿಸಿದ  ಪ್ರಕರಣದಲ್ಲಿ ಅಸ್ಸಾಂನ ಮತ್ತೊಂದು ನ್ಯಾಯಾಲಯವು ಜಾಮೀನು ನೀಡಿದ ನಂತರ ಮೆವಾನಿ ಅವರನ್ನು ಎಪ್ರಿಲ್ 25 ರಂದು ಹಲ್ಲೆ ಆರೋಪದಲ್ಲಿ ಮರು ಬಂಧಿಸಲಾಗಿತ್ತು.

ಅಸ್ಸಾಂನ ಕೊಕ್ರಜಾರ್‌ನ ಸ್ಥಳೀಯ ಬಿಜೆಪಿ ನಾಯಕ ಮೆವಾನಿ ಅವರ ವಿರುದ್ಧ ದೂರು ನೀಡಿದ ನಂತರ ಅಸ್ಸಾಂ ಪೊಲೀಸರ ತಂಡವು ಕಳೆದ ಗುರುವಾರ ಗುಜರಾತ್‌ನ ಪಾಲನ್‌ಪುರದಿಂದ ಮೆವಾನಿ ಅವರನ್ನು ಮೊದಲ ಬಾರಿ ಬಂಧಿಸಿತು. ಪ್ರಧಾನಿ ಮೋದಿಯವರ ಕಟು ಟೀಕಾಕಾರರಾದ ಮೆವಾನಿ ತನ್ನ ಬಂಧನವನ್ನು " ಪ್ರಧಾನಿ ಕಚೇರಿಯ  ಸೇಡಿನ ರಾಜಕೀಯ" ಎಂದು ಕರೆದಿದ್ದಾರೆ.

"ಇದು ಬಿಜೆಪಿ ಹಾಗೂ  ಆರ್‌ಎಸ್‌ಎಸ್‌ನ ಷಡ್ಯಂತ್ರ. ಅವರು ನನ್ನ ಇಮೇಜ್‌ಗೆ ಧಕ್ಕೆ ತರಲು ಇದನ್ನು ಮಾಡಿದ್ದಾರೆ. ಅವರು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರು ಇದನ್ನು ರೋಹಿತ್ ವೇಮುಲಾಗೆ ಮಾಡಿದ್ದರು. ಈಗ ಅವರು  ನನ್ನನ್ನು ಗುರಿಯಾಗಿಸುತ್ತಿದ್ದಾರೆ" ಎಂದು ಮೇವಾನಿ ಟ್ವೀಟ್ ಪ್ರಕರಣದಲ್ಲಿ ಜಾಮೀನು ಪಡೆದ ದಿನ ಸುದ್ದಿಗಾರರಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News