×
Ad

ಜಮ್ಮುಕಾಶ್ಮೀರ: ನಕಲಿ ಕೆಮ್ಮಿನ ಸಿರಪ್ ಸೇವಿಸಿ ಮೃತಪಟ್ಟ 12 ಮಕ್ಕಳ ಕುಟುಂಬಗಳಿಗೆ ಪರಿಹಾರ

Update: 2022-04-29 20:51 IST
PHOTO PTI

ಹೊಸದಿಲ್ಲಿ,ಎ.29: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ನೆಚ್ಚಾರಸಿ)ದ ಶಿಫಾರಸಿನ ಮೇರೆಗೆ ಜಮ್ಮು-ಕಾಶ್ಮೀರ ಆಡಳಿತವು ಉಧಮಪುರದಲ್ಲಿ ನಕಲಿ ಕೆಮ್ಮಿನ ಸಿರಪ್ ಸೇವಿಸಿ ಮೃತಪಟ್ಟಿದ್ದ 12 ಮಕ್ಕಳ ಕುಟುಂಬಗಳಿಗೆ 36 ಲ.ರೂ.ಗಳ ಪರಿಹಾರವನ್ನು ಪಾವತಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.

2019,ಡಿಸೆಂಬರ್ ಮತ್ತು 2020,ಜನವರಿಯಲ್ಲಿ ಉಧಮಪುರದ ರಾಮನಗರದಲ್ಲಿ ಈ ಘಟನೆ ಸಂಭವಿಸಿತ್ತು. ಈ ಸಂಬಂಧ 2020,ಎ.30ರಂದು ಸಲ್ಲಿಸಲಾಗಿದ್ದ ದೂರಿನ ಆಧಾರದಲ್ಲಿ ಎನ್ನೆಚ್ಚಾರ್ಸಿ ಪ್ರಕರಣವನ್ನು ದಾಖಲಿಸಿತ್ತು.
ಮಕ್ಕಳ ಸಾವುಗಳ ಬಳಿಕ ನಡೆಸಿದ್ದ ತನಿಖೆಯಿಂದ ಕೆಮ್ಮಿನ ಸಿರಪ್ ನಕಲಿ ಎನ್ನುವುದು ಪತ್ತೆಯಾಗಿತ್ತು.
 
ತನ್ನ ಔಷಧಿ ನಿಯಂತ್ರಣ ಇಲಾಖೆಯ ಮೇಲೆ ತಪ್ಪು ಹೊರಿಸಲು ಅವಕಾಶವಿಲ್ಲ. ಗುಣಮಟ್ಟದ ಔಷಧಿಗಳನ್ನು ತಯಾರಿಸುವ ಹೊಣೆಗಾರಿಕೆ ಉತ್ಪಾದಕ ಕಂಪನಿಗಳದ್ದಾಗಿದೆ ಮತ್ತು ಇಲಾಖೆಯು ಈ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ವಿಧ್ಯುಕ್ತ ದೂರನ್ನು ಸಲ್ಲಿಸಿದೆ ಎಂದು ಜಮ್ಮು-ಕಾಶ್ಮೀರ ಆಡಳಿತವು ಎನ್ನೆಚ್ಚಾರ್ಸಿ ನೋಟಿಸ್‌ಗಳಿಗೆ ಆರಂಭದಲ್ಲಿ ಉತ್ತರಿಸಿತ್ತು. ಈ ವಾದವನ್ನು ತಿರಸ್ಕರಿಸಿದ್ದ ಎನ್ನೆಚ್ಚಾರ್ಸಿ,ಔಷಧಿ ಇಲಾಖೆಯು ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಬಯಸಿಲ್ಲವಾದರೂ ಪ್ರಕರಣದಲ್ಲಿಯ ಲೋಪವನ್ನು ಅದು ನಿರಾಕರಿಸಿಲ್ಲ. ತನ್ನ ವ್ಯಾಪ್ತಿಯಲ್ಲಿ ಮಾರಾಟವಾಗುವ ಔಷಧಿಗಳ ಕಲಬೆರಕೆ ಮತ್ತು ಅದರಲ್ಲಿಯ ಘಟಕಗಳ ಮೇಲೆ ನಿಯಮಿತ ನಿಗಾಯಿರಿಸಲು ಇಲಾಖೆಯು ವಿಫಲಗೊಂಡಿದೆ. ಆದ್ದರಿಂದ ನಿರ್ಲಕ್ಷಕ್ಕೆ ಹೊಣೆಯಾಗಿರುವ ಅದು ಮೃತ ಮಕ್ಕಳ ಕುಟುಂಬಗಳಿಗೆ ತಲಾ ಮೂರು ಲ.ರು.ಪರಿಹಾರವನ್ನು ಪಾವತಿಸಬೇಕು ಎಂದು ನಿರ್ದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News