×
Ad

ಮಲಯಾಳಂ ನಟ, ನಿರ್ಮಾಪಕ ವಿಜಯ್‌ ಬಾಬು ವಿರುದ್ಧ ಮತ್ತೋರ್ವ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ಆರೋಪ

Update: 2022-05-01 13:08 IST

ಮಲಯಾಳಂನ ನಟ-ನಿರ್ಮಾಪಕ ವಿಜಯ್ ಬಾಬು ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಮತ್ತು ನಿಂದನೆ ಆರೋಪ ಮಾಡಿದ ಕೆಲವು ದಿನಗಳ ನಂತರ ಇದೀಗ ಮತ್ತೋರ್ವ ಮಹಿಳೆ ವಿಜಯ್‌ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. "ನನ್ನ ಪರಿಚಯವಾದ ಕೇವಲ 20-30 ನಿಮಿಷಗಳಲ್ಲೇ ಅವರು ನನಗೆ ಮುತ್ತಿಕ್ಕಲು ಪ್ರಯತ್ನಿಸಿದ್ದರು ಎಂದು #metoo ಇನ್‌ಸ್ಟಾಗ್ರಾಂ ಪೋಸ್ಟ್‌ ನಲ್ಲಿ ಅವರು ಹಂಚಿಕೊಂಡಿದ್ದಾರೆ.

"ಈ ಪ್ರಕರಣವು ನನಗೆ ಆಘಾತವನ್ನುಂಟು ಮಾಡಿತ್ತು ಮಾತ್ರವಲ್ಲದೇ ನನ್ನನ್ನು ಚಿತ್ರರಂಗದಿಂದಲೇ ದೂರ ಉಳಿಯುವಂತೆ ಮಾಡಿತ್ತು" ಎಂದು ಮಹಿಳೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಟಿಯೋರ್ವರು ವಿಜಯ್‌ ಬಾಬು ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ಬಳಿಕವಷ್ಟೇ ನನಗೆ ಈ ವಿಚಾರ ಜನರ ಮುಂದಿಡಲು ಸಾಧ್ಯವಾಗಿದ್ದು ಎಂದೂ ಅವರು ಹೇಳಿದ್ದಾರೆ. 

"ಆತ ಮದ್ಯ ಸೇವನೆ ಮಾಡುತ್ತಿದ್ದ. ನನ್ನನ್ನೂ ಕುಡಿಯುವಂತೆ ಒತ್ತಾಯಿಸಿದ್ದ. ನಾನು ಅದನ್ನು ತಿರಸ್ಕರಿಸಿ ನನ್ನ ಕೆಲಸ ಮುಂದುವರಿಸಿದೆ ಅಷ್ಟರಲ್ಲೇ ಆತ ನನ್ನ ಕಡೆಗೆ ಬಗ್ಗಿ ಚುಂಬಿಸಲು ಯತ್ನಿಸಿದ. ಬಳಿಕ ನಾನು ಆ ಪರಿಸ್ಥಿತಿಯಿಂದ ತಪ್ಪಿಸಿಕೊಂಡೆ" ಎಂದು ಅವರು ಹೇಳಿದ್ದಾರೆ. 

ಈ ನಡುವೆ, ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ ನಂತರ ವಿಜಯ್‌ ಬಾಬು ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ತಕ್ಷಣ ದೇಶದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News