ಮಧ್ಯಪ್ರದೇಶ: ರಾಮನವಮಿ ವೇಳೆ ಹಿಂಸಾಚಾರ ನಡೆದಿದ್ದ ಖರ್ಗೋನ್ ನಲ್ಲಿ ಈದ್ ದಿನ ಕರ್ಫ್ಯೂ ಹೇರಿದ ಜಿಲ್ಲಾಡಳಿತ
ಭೋಪಾಲ್: ಕಳೆದ ತಿಂಗಳು ರಾಮನವಮಿ ಸಂದರ್ಭದಲ್ಲಿ ಕೋಮುಗಲಭೆ ನಡೆದಿದ್ದ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಈದ್ ಸಂದರ್ಭದಲ್ಲಿ ಸಂಪೂರ್ಣ ಕರ್ಫ್ಯೂ ಘೋಷಿಸಲಾಗಿದೆ. ಸೋಮವಾರ ಅಥವಾ ಮಂಗಳವಾರ ಈದ್ ಆಚರಿಸುವ ಸಾಧ್ಯತೆ ಇದೆ. ಈ ಎರಡೂ ದಿನ ಕರ್ಫ್ಯೂ ಇರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ ಎಂದು NDTV ವರದಿ ಮಾಡಿದೆ.
"ಮೇ 2 ಹಾಗೂ ಮೇ 3 ರಂದು ಖಾರ್ಗೋನ್‌ನಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗುವುದು. ಈದ್ ಪ್ರಾರ್ಥನೆಗಳನ್ನು ಮನೆಯಲ್ಲಿಯೇ ಮಾಡಬೇಕು" ಎಂದು ಖಾರ್ಗೋನ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮ್ಮರ್ ಸಿಂಗ್ ಹೇಳಿದ್ದಾರೆ.
ಈ ದಿನಗಳಲ್ಲಿ ಅಂಗಡಿಗಳು ತೆರೆದಿರುತ್ತವೆ ಹಾಗೂ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪಾಸ್ ನೀಡಲಾಗುವುದು ಎಂದು ಅವರು ಹೇಳಿದರು.
ಅಲ್ಲದೆ, ಅಕ್ಷಯ ತೃತೀಯ ಮತ್ತು ಪರಶುರಾಮ ಜಯಂತಿಯಂದು ಯಾವುದೇ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲು ಅನುಮತಿಸುವುದಿಲ್ಲ ಎಂದು ಸಿಂಗ್ ಹೇಳಿದರು.
ಎಪ್ರಿಲ್ 10 ರಂದು ಖಾರ್ಗೋ ನ್ ನಲ್ಲಿ ರಾಮನವಮಿ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ನಡೆದಿದ್ದ ಘರ್ಷಣೆಯಲ್ಲಿ 24 ಜನರು ಗಾಯಗೊಂಡಿದ್ದರು. ಕೋಮು ಘರ್ಷಣೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಮೇಲೆ ಗುಂಡು ಹಾರಿಸಲಾಗಿತ್ತು.
ಆನಂದ್ ನಗರ-ಕಪಾಸ್ ಮಂಡಿ ಪ್ರದೇಶದಲ್ಲಿ ನಡೆದ ಇಬ್ರಿಸ್ ಖಾನ್ ಹತ್ಯೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಖಾರ್ಗೋನ್‌ನಾದ್ಯಂತ ದಾಖಲಾದ 64 ಕೋಮುಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ 150 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.