ಬ್ರಿಟನ್: ಸಂಸತ್‌ನಲ್ಲಿ ಅಶ್ಲೀಲ ವೀಡಿಯೊ ವೀಕ್ಷಣೆ; ಆಡಳಿತ ಪಕ್ಷದ ಸಂಸದನ ರಾಜೀನಾಮೆ

Update: 2022-05-01 17:27 GMT

ಲಂಡನ್, ಮೇ 1: ಬ್ರಿಟನ್ ನ ಸಂಸತ್ತಿನಲ್ಲಿ ತನ್ನ ಮೊಬೈಲ್ ಫೋನಿನಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸಿರುವುದನ್ನು ಒಪ್ಪಿಕೊಂಡ ಆಡಳಿತ ಪಕ್ಷ ಕನ್ಸರ್ವೇಟಿವ್ ಪಕ್ಷದ ಸಂಸದ ನೀಲ್ ಪ್ಯಾರಿಶ್ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. 

2010ರಿಂದ ಸಂಸದರಾಗಿರುವ ನೀಲ್ ಪ್ಯಾರಿಶ್ ಸಂಸತ್ತಿನ ಚೇಂಬರ್ ಒಳಗೆ ಮೊಬೈಲ್ ಫೋನ್ನಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸುತ್ತಿರುವ ವೀಡಿಯೊ ವೈರಲ್ ಆದ ಬಳಿಕ ಅವರ ರಾಜೀನಾಮೆಗೆ ಆಡಳಿತ ಪಕ್ಷದ ಸಂಸದರ ಸಹಿತ ವ್ಯಾಪಕ ಆಗ್ರಹ ಕೇಳಿ ಬಂದಿತ್ತು. ಇದರಿಂದ ತೀವ್ರ ಒತ್ತಡಕ್ಕೆ ಒಳಗಾದ ಪ್ಯಾರಿಶ್, ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದಾರೆ. 

ಮತ್ತೊಂದು ವೆಬ್ಸೈಟ್ ನ ಬಟನ್ ಒತ್ತಿದಾಗ ಅಕಸ್ಮಾತ್ ಅದೇ ಹೆಸರಿನ ಅಶ್ಲೀಲ ಚಿತ್ರದ ವೆಬ್ಸೈಟ್ ತೆರೆದುಕೊಂಡಿದೆ. ಒಂದು ಕ್ಷಣದ ಹುಚ್ಚುತನಕ್ಕೆ ಮಾರುಹೋಗಿ ಕೆಲ ಹೊತ್ತು ಅದನ್ನು ವೀಕ್ಷಿಸಿದ್ದೇನೆ. ನನ್ನ ಸಂವೇದನೆ, ಭಾವನೆ ಎಲ್ಲದನ್ನೂ ಮರೆತು ವರ್ತಿಸಿದ್ದು ಇದು ಹುಚ್ಚುತನದ ಮತ್ತು ತಪ್ಪು ವರ್ತನೆಯಾಗಿದೆ ಎಂದು ನೀಲ್ ಪ್ಯಾರಿಶ್ ಒಪ್ಪಿಕೊಂಡಿದ್ದಾರೆ. ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಆವರು ಕಾರ್ಯ ನಿರ್ವಹಿಸುತ್ತಿದ್ದರು.

ಸರಿ, ತಪ್ಪಿನ ಮಾತು ಹಾಗಿರಲಿ, ನಾನು ಮಾಡಿದ್ದರ ಬಗ್ಗೆ ನನಗೆ ಖಂಡಿತಾ ಹೆಮ್ಮೆಯಿಲ್ಲ. ಯಾರಿಗೂ ನೋವುಂಟು ಮಾಡಲು ನಾನು ಬಯಸಿಲ್ಲ. ಜನರು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬುದನ್ನು ಮರೆತುಬಿಟ್ಟಿದ್ದೆ ಎಂದವರು ಹೇಳಿದ್ದಾರೆ. ಈ ಪ್ರಕರಣ ಇತರರಿಗೆ ಪಾಠವಾಗಬೇಕು. ಸಂಸತ್ತಿನಲ್ಲಿ ಕುಳಿತು ಮೊಬೈಲ್ ಫೋನ್ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಖಂಡಿತಾ ಸ್ವೀಕಾರರ್ಹವಲ್ಲ ಎಂದು ಸ್ಕಾಟ್ಲ್ಯಾಂಡ್ ಸಂಸದೆ ನಿಕೋಲಾ ಸ್ಟರ್ಗನ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News