ಮದೀನಾನದಲ್ಲಿ ಪಾಕ್ ಪ್ರಧಾನಿಗೆ ನಿಂದನೆ ಪ್ರಕರಣ: ಇಮ್ರಾನ್‌ ಖಾನ್ ವಿರುದ್ಧ ಪ್ರಕರಣ ದಾಖಲು

Update: 2022-05-01 17:50 GMT
ಇಮ್ರಾನ್‌ ಖಾನ್

ಇಸ್ಲಮಾಬಾದ್, ಮೇ 1: ಸೌದಿ ಅರೆಬಿಯಾದ ಮದೀನಾ ಮಸೀದಿಗೆ ಪಾಕ್ ಪ್ರಧಾನಿ ಶಹಬಾಝ್ ಶರೀಫ್ ನೇತೃತ್ವದ ನಿಯೋಗ ಶನಿವಾರ ತೆರಳಿದ್ದ ಸಂದರ್ಭ ‘ಚೋರ್’ ಎಂದು ಕೂಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಪಂಜಾಬ್ ಪೊಲೀಸರು ಪದಚ್ಯುತ ಪ್ರಧಾನಿ ಇಮ್ರಾನ್‌ಖಾನ್ ಹಾಗೂ ಇತರ 150 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ. 

ಮದೀನಾದಲ್ಲಿ ಪ್ರವಾದಿಯವರ ಮಸೀದಿಯನ್ನು ಅಪವಿತ್ರಗೊಳಿಸಿರುವುದು, ಗೂಂಡಾಗಿರಿ ಮತ್ತು ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿದ ಬಗ್ಗೆ ಸ್ಥಳೀಯ ವ್ಯಕ್ತಿ ನಯೀಮ್ ಭಟ್ಟಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇಮ್ರಾನ್‌ ಖಾನ್ ಅವರ ಬೆಂಬಲಿಗರೆನ್ನಲಾದ ಯಾತ್ರಿಗಳು ಶಹಬಾಝ್ ಹಾಗೂ ನಿಯೋಗದ ಸದಸ್ಯರನ್ನು ಉದ್ದೇಶಿಸಿ ‘ಕಳ್ಳರು, ದೇಶದ್ರೋಹಿಗಳು’ ಎಂದು ಘೋಷಣೆ ಕೂಗಿ ಅವಹೇಳನ ಮಾಡಿದ್ದರು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮದೀನಾದ ಪೊಲೀಸರು 5 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದರು ಎಂದು ವರದಿಯಾಗಿದೆ.

ಪ್ರಕರಣದ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಶನಿವಾರ ರಾತ್ರಿಯೇ ಇಮ್ರಾನ್ಖಾನ್, ಅವರ ಸಂಪುಟದಲ್ಲಿ ಸಚಿವರಾಗಿದ್ದ ಫವಾದ್ ಚೌದರಿ ಮತ್ತು ಶೇಖ್ ರಶೀದ್, ಪ್ರಧಾನಿಯ ಮಾಜಿ ಸಲಹೆಗಾರ ಶಹಬಾರ್ ಗುಲ್, ಸಂಸತ್ತಿನ ಮಾಜಿ ಉಪಸ್ಪೀಕರ್ ಖಾಸಿಮ್ ಸೂರಿ, ಇಮ್ರಾನ್ಖಾನ್ ಆಪ್ತರಾದ, ಲಂಡನ್ ನಿವಾಸಿ ಅನಿಲ್ ಮುಸರತ್ ಮತ್ತುಸಾಹಿಬ್ಝಾದ ಜೆಹಾಂಗಿರ್ ಸಹಿತ 150 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News