ಅಸ್ಸಾಂ: ಪೊಲೀಸ್ ಎನ್ ಕೌಂಟರ್ ನಲ್ಲಿ ಕಲ್ಲಿದ್ದಲು ಮಾಫಿಯಾದ ಶಂಕಿತ ನಾಯಕ ಬಲಿ

Update: 2022-05-01 18:30 GMT

ಗುವಾಹಟಿ, ಮೇ 1: ಅಸ್ಸಾಂನ ಹೈಲಖಂಡಿ ಜಿಲ್ಲೆಯಲ್ಲಿ ರವಿವಾರ ಮುಂಜಾನೆ 1.30ಕ್ಕೆ ನಡೆದ ಗುಂಡಿನ ಚಕಮಕಿಯಲ್ಲಿ ಕಲ್ಲಿದ್ದಲು ಮಾಫಿಯಾದ ಶಂಕಿತ ನಾಯಕ ಮೃತಪಟ್ಟಿದ್ದಾನೆ. ಈತ ಈ ಹಿಂದೆ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ.

ಆರೋಪಿ ಅಬ್ದುಲ್ ಅಹದ್ ಚೌಧರಿಯನ್ನು ಎಪ್ರಿಲ್ 30ರಂದು ಕರೀಮ್ಗಂಜ್ ಜಿಲ್ಲೆಯಿಂದ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು ಎಂದು ಪೊಲೀಸ್ ಅಧೀಕ್ಷಕ ಗೌರವ್ ಉಪಾಧ್ಯ ಅವರು ಹೇಳಿದ್ದಾರೆ. ಅಬ್ದುಲ್ ಅಹದ್ ಚೌಧುರಿಯನ್ನು ವೈದ್ಯಕೀಯ ತಪಾಸಣೆಗೆ ಲಾಲಾ ನಾಗರಿಕ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಎಂದು ಅನಾಮಿಕ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಘಾಲಯದಿಂದ ಬಾಂಗ್ಲಾದೇಶಕ್ಕೆ ಅಸ್ಸಾಂನ ಬಾರಕ್ ಕಣಿವೆಯ ಮೂಲಕ ಅಕ್ರಮ ಕಲ್ಲಿದ್ದಲು ವ್ಯಾಪಾರಕ್ಕೆ ಸಂಬಂಧಿಸಿ ಸಿಬಿಐ 2020ರಲ್ಲಿ ದಾಖಲಿಸಿದ ಪ್ರಕರಣದಲ್ಲಿ ಚೌಧರಿ ಹೆಸರನ್ನು ಶಂಕಿತನೆಂದು ಉಲ್ಲೇಖಿಸಲಾಗಿತ್ತು.

ಅಸ್ಸಾಂನಲ್ಲಿ 2021 ಮೇಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಕನಿಷ್ಠ 47 ಮಂದಿ ಸಾವನ್ನಪ್ಪಿದ್ದರು ಹಾಗೂ 110ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಡಿಸೆಂಬರ್ನಲ್ಲಿ ಸ್ಕ್ರಾಲ್ ಡಾಟ್ ಇನ್ ಪೊಲೀಸ್ ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು. ಈ ಸಂದರ್ಭ ಇದುವರೆಗೆ ಎನ್ಕೌಂಟರ್ನಲ್ಲಿ ಬಲಿಯಾದ 30 ಮಂದಿಯಲ್ಲಿ 20 ಮಂದಿ ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರು ಎಂಬುದು ಪತ್ತೆಯಾಗಿತ್ತು. ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರು, ತಾವು ಸ್ವರಕ್ಷಣೆಗಾಗಿ ಅಥವಾ ಕೈದಿ ಪರಾರಿಯಾಗುವುದನ್ನು ತಡೆಯಲು ಗುಂಡು ಹಾರಿಸಿದೆವು ಎಂದು ಪ್ರತಿಪಾದಿಸಿದ್ದಾರೆ.

ಕೈದಿಗಳು ಪರಾರಿಯಾಗಲು ಪ್ರಯತ್ನಿಸಿದರು ಹಾಗೂ ಪೊಲೀಸರು ಗುಂಡು ಹಾರಿಸಿದರು. ಇದರಿಂದ ಅವರು ಮೃತಪಟ್ಟರು ಅಥವಾ ಗಾಯಗೊಂಡರು ಎಂದು ರಾಜ್ಯದಲ್ಲಿ ಪೊಲೀಸರು ಪ್ರತಿಪಾದಿಸುತ್ತಿರುವುದು ವಾಡಿಕೆಯ ವಿದ್ಯಾಮಾನ ಎಂದು ಅಸ್ಸಾಂನ ಸ್ಥಳೀಯ ನ್ಯಾಯಾಲಯ ಶುಕ್ರವಾರ ಹೇಳಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News