×
Ad

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿದ ಬಿಜೆಪಿ ಶಾಸಕ

Update: 2022-05-02 15:11 IST
Photo:twitter

ಚಂಡಿಗಡ: ಹರ್ಯಾಣದ ಅಂಬಾಲಾ ನಗರದಲ್ಲಿ ರವಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ ಅಸೀಮ್ ಗೋಯೆಲ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿ  ಪ್ರತಿಜ್ಞೆ ಮಾಡಿದರು scroll.in ವರದಿ ಮಾಡಿದೆ.

ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣಗೈದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಟಿವಿ  ಚಾನೆಲ್ ಸುದರ್ಶನ್ ನ್ಯೂಸ್‌ನ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ ಅವರು ಬಿಜೆಪಿ ಶಾಸಕನಿಗೆ ಪ್ರಮಾಣ ವಚನ ಬೋಧಿಸಿದರು.

ರವಿವಾರದ ಕಾರ್ಯಕ್ರಮದ ವೀಡಿಯೊಗಳಲ್ಲಿ, ಗೋಯೆಲ್ ಯಾವುದೇ  ಬೆಲೆ ತೆತ್ತಾದರೂ  "ಹಿಂದೂ ರಾಷ್ಟ" ಗುರಿಯನ್ನು ಸಾಧಿಸಲು ತ್ಯಾಗ ಮಾಡುವ ಕುರಿತು  ಪ್ರತಿಜ್ಞೆ ಮಾಡುತ್ತಿರುವುದು ಕಂಡುಬಂದಿದೆ. ಗೋಯೆಲ್  ತಾನು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

"ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮತ್ತು ಹಿಂದೂ ರಾಷ್ಟ್ರವಾಗಿ ಉಳಿಸಲು ನಾವು ಪ್ರತಿಜ್ಞೆ ಮಾಡುತ್ತೇವೆ" ಎಂದು ಸಮಾರಂಭದಲ್ಲಿ ಭಾಗವಹಿಸಿದವರು ತಮ್ಮ ಪ್ರಮಾಣವಚನದಲ್ಲಿ ಹೇಳಿದರು. “ಅಗತ್ಯವಿದ್ದರೆ, ನಾವು ಅದಕ್ಕಾಗಿ ಯಾವುದೇ ತ್ಯಾಗವನ್ನು ಮಾಡುತ್ತೇವೆ ಅಥವಾ ಬಲಿದಾನವನ್ನು ಪಡೆದುಕೊಳ್ಳುತ್ತೇವೆ. ಆದರೆ ಯಾವುದೇ ಬೆಲೆ ತೆತ್ತಾದರೂ ನಾವು ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುತ್ತೇವೆ. ನಮ್ಮ ಗುರಿಯನ್ನು ಸಾಧಿಸುವ ಶಕ್ತಿಯನ್ನು ನಮಗೆ ನೀಡುವಂತೆ ನಾವು ನಮ್ಮ ಪೂರ್ವಜರು ಹಾಗೂ  ನಮ್ಮ ದೇವತೆಗಳನ್ನು ಪ್ರಾರ್ಥಿಸುತ್ತೇವೆ’’ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗದಿರುವುದು ದುರದೃಷ್ಟಕರ ಎಂದು ಚವ್ಹಾಂಕೆ ಹೇಳಿದರು ಎಂದು ಹಿಂದಿ ದಿನಪತ್ರಿಕೆ 'ದೈನಿಕ್ ಜಾಗರಣ್' ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News