ಬುಲ್ಡೋಝರ್ ಕಾರ್ಯಾಚರಣೆ ಟೀಕಿಸಿದ ಬ್ರಿಟಿಷ್ ಸಂಸದೆ: 'ಟುಕ್ಡೇ ಟುಕ್ಡೇ ಗ್ಯಾಂಗ್' ಅನ್ನು ದೂರಿದ ಸಚಿವ ಕಿರಣ್ ರಿಜಿಜು

Update: 2022-05-02 14:37 GMT

 ಹೊಸದಿಲ್ಲಿ: ಹಿಂಸೆ ನಡೆದ ಸ್ಥಳಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಬಿಜೆಪಿ ಆಡಳಿತದ ಕೆಲ ರಾಜ್ಯಗಳು ಇತ್ತೀಚೆಗೆ ನಡೆಸಿದ ಬುಲ್‍ಡೋಜರ್ ಕಾರ್ಯಾಚರಣೆಗಳನ್ನು ಟೀಕಿಸಿ ಬ್ರಿಟಿಷ್ ಸಂಸದೆಯೊಬ್ಬರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು,  "ನರೇಂದ್ರ ಮೋದಿ ಸರಕಾರಕ್ಕೆ ಅಗೌರವ ತರುವಲ್ಲಿ 'ಟುಕ್ಡೇ ಟುಕ್ಡೇ ಗ್ಯಾಂಗ್' ಕೆಲಸ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.

ಎಪ್ರಿಲ್ 28ರಂದು ಬ್ರಿಟಿಷ್ ಸಂಸದೆ ನಾಡಿಯಾ ವಿಟ್ಟೋಮ್ ಅವರು ಬ್ರಿಟಷ್ ಸಂಸತ್ತಿನಲ್ಲಿ ಮಾತನಾಡುತ್ತಾ, ತಮ್ಮ ದೇಶದ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಇತ್ತೀಚಿನ ಭೇಟಿ  ಅಲ್ಲಿನ ನೆಲಸಮ ಕಾರ್ಯಾಚರಣೆಯನ್ನು ಕಾನೂನುಬದ್ಧಗೊಳಿಸಲು ಸಹಾಯ ಮಾಡಿತ್ತೇ ಎಂದು ಪ್ರಶ್ನಿಸಿದ್ದರು.

ವಡೋದರಾದಲ್ಲಿ ಜೆಸಿಬಿ ಘನ ಉಪಕರಣ ತಯಾರಿಕಾ ಫ್ಯಾಕ್ಟರಿಯೊಂದರಲ್ಲಿ ಡಿಗ್ಗರ್ ಜತೆಗೆ ಬೋರಿಸ್ ಜಾನ್ಸನ್ ಅವರು ಇರುವ ಚಿತ್ರವನ್ನು ಉಲ್ಲೇಖಿಸಿ ನಾಡಿಯಾ ಅವರು ತಮ್ಮ ಹೇಳಿಕೆ ನೀಡಿದ್ದರು. ದಿಲ್ಲಿಯ ಜಹಾಂಗೀರ್‍ಪುರಿಯಲ್ಲಿ ನೆಲಸಮ ಕಾಯಾಚರಣೆಯನ್ನು ಅಲ್ಲಿನ ಬಿಜೆಪಿ ಆಡಳಿತದ ಸ್ಥಳೀಯ ಸಂಸ್ಥೆ ನಡೆಸಿದ ಮರುದಿನ ನಡೆದ ಬೆಳವಣಿಗೆ ಇದಾಗಿತ್ತು.

ನಾಡಿಯಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಿಜಿಜು, ಆಕೆಗೆ ವಾಸ್ತವದ ಬಗ್ಗೆ ಅರಿವಿಲ್ಲ ಎಂದರಲ್ಲದೆ ಅದೇ ಸಮಯ ತಾವು ಆಕೆಯನ್ನು ದೂರುವುದಿಲ್ಲ ಎಂದರು.

"ಇದು  ನರೇಂದ್ರ ಮೋದಿ ಸರಕಾರದ ದೊಡ್ಡ ಸಾಧನೆಯನ್ನು ಗೌಣವಾಗಿಸುವ ಉದ್ದೇಶದಿಂದ ಟುಕ್ಡೇ ಟುಕ್ಡೇ ಗ್ಯಾಂಗ್ ನಡೆಸುವ ಋಣಾತ್ಮಕ ಪ್ರಚಾರದ ಫಲವಾಗಿದೆ, ಭಾರತವು ತನ್ನ ನೆಲದ ಕಾನೂನಿನ ಮೇಲೆ ನಂಬಿಕೆಯಿರಿಸಿದೆ" ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News