×
Ad

ಕಪ್ಪು ಸಮುದ್ರದಲ್ಲಿ ರಶ್ಯದ 2 ಗಸ್ತು ದೋಣಿ ನಾಶ: ಉಕ್ರೇನ್ ಹೇಳಿಕೆ

Update: 2022-05-02 23:34 IST
PHOTO COURTESY:TWITTER

ಕೀವ್, ಮೇ 2: ಕಪ್ಪು ಸಮುದ್ರದಲ್ಲಿ ಸ್ನೇಕ್ ಐಲ್ಯಾಂಡ್ ಸಮೀಪ ಗಸ್ತು ತಿರುಗುತ್ತಿದ್ದ ರಶ್ಯದ 2 ಗಸ್ತು ದೋಣಿಗಳನ್ನು ಡ್ರೋನ್ ಮೂಲಕ ಕ್ಷಿಪಣಿ ಪ್ರಯೋಗಿಸಿ ನಾಶಗೊಳಿಸಲಾಗಿದೆ ಎಂದು ಉಕ್ರೇನ್ ಸೋಮವಾರ ಹೇಳಿದೆ.

 ಕಪ್ಪು ಸಮುದ್ರದಲ್ಲಿರುವ ಸ್ನೇಕ್ ಐಲ್ಯಾಂಡ್(ಸರ್ಪ ದ್ವೀಪ) ಉಕ್ರೇನ್ ಗೆ ಸೇರಿದ್ದು, ಇದರ ಮೇಲೆ ಕಳೆದ ಕೆಲ ದಿನಗಳಿಂದ ರಶ್ಯದ ನೌಕಾಸೇನೆ ಮುತ್ತಿಗೆ ಹಾಕಿದೆ. ಸೋಮವಾರ ಬೆಳಿಗ್ಗೆ ದ್ವೀಪದ ಬಳಿ ಗಸ್ತು ತಿರುಗುತ್ತಿದ್ದ ರಶ್ಯದ 2 ರ್ಯಾಪ್ಟರ್ ಗಸ್ತು ದೋಣಿಗಳನ್ನು ಡ್ರೋನ್ ಮೂಲಕ ನಾಶಗೊಳಿಸಲಾಗಿದೆ ಎಂದು ಉಕ್ರೇನ್ ರಕ್ಷಣಾ ಇಲಾಖೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆಗೊಳಿಸಿದೆ. 

ಜತೆಗೆ, ದ್ವೀಪದ ಬಳಿ ಸಣ್ಣ ಸೇನಾ ವಾಹನದಲ್ಲಿ ಸ್ಫೋಟ ಸಂಭವಿಸುವ ಮತ್ತು ಹೊಗೆ ಏಳುವ ವೀಡಿಯೊವನ್ನೂ ಹಂಚಿಕೊಂಡಿದೆ. ಡ್ರೋನ್ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂಬ ಉಕ್ರೇನ್ ನ ಸೇನಾ ಕಮಾಂಡರ್ ಘೋಷಣೆಯನ್ನೂ ರಕ್ಷಣಾ ಇಲಾಖೆ ಬಿಡುಗಡೆ ಮಾಡಿದೆ. ಟರ್ಕಿಯಲ್ಲಿ ನಿರ್ಮಾಣಗೊಂಡ ಮಿಲಿಟರಿ ಡೊರೀನ್ ಇದಾಗಿದೆ ಎಂದು ಇಲಾಖೆ ಹೇಳಿದೆ.

 ಅತ್ಯಧಿಕ ವೇಗದಲ್ಲಿ ಚಲಿಸುವ ರ್ಯಾಪ್ಟರ್ ಗಸ್ತು ದೋಣಿಯಲ್ಲಿ 3 ಸಿಬಂದಿ ಹಾಗೂ 20 ಯೋಧರು ಪ್ರಯಾಣಿಸಬಹುದು. ಇದರಲ್ಲಿ ಮೆಷಿನ್ ಗನ್ ಜೋಡಿಸಲಾಗಿದ್ದು ಇವನ್ನು ವಿಚಕ್ಷಣ(ಸ್ಥಳ ಪರಿಶೀಲನೆ) ಅಥವಾ ಲ್ಯಾಂಡಿಂಗ್ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News