ರಾಹುಲ್ ಗಾಂಧಿ ನೈಟ್ ಕ್ಲಬ್‍ನಲ್ಲಿರುವ ವೀಡಿಯೋ ಟ್ವೀಟ್ ಮಾಡಿದ ಬಿಜೆಪಿ, ಅದರಲ್ಲಿ ತಪ್ಪೇನಿದೆ? ಎಂದ ಕಾಂಗ್ರೆಸ್

Update: 2022-05-03 14:37 GMT

ಹೊಸದಿಲ್ಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕಾಠ್ಮಂಡುವಿನ ನೈಟ್ ಕ್ಲಬ್ ಒಂದರಲ್ಲಿ ಪಾರ್ಟಿಯಲ್ಲಿ ಭಾಗವಹಿಸುತ್ತಿರುವ ವೀಡಿಯೊವೊಂದನ್ನು ಶೇರ್ ಮಾಡಿ ಬಿಜೆಪಿ ವಿವಾದವನ್ನು ಹುಟ್ಟುಹಾಕಿದರೆ, ಕಾಂಗ್ರೆಸ್ ತನ್ನ ನಾಯಕನನ್ನು ಸಮರ್ಥಿಸಿಕೊಂಡಿದ್ದು "ಅದರಲ್ಲಿ ತಪ್ಪೇನಿದೆ?'' ಎಂದು ಪ್ರಶ್ನಿಸಿದೆ.

ರಾಹುಲ್ ಗಾಂಧಿ ಅವರ ವೈರಲ್ ವೀಡಿಯೋ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ‘’ರಾಹುಲ್ ಅವರು ಕಾಠ್ಮಂಡುವಿನಲ್ಲಿ ಪತ್ರಕರ್ತ ಸ್ನೇಹಿತರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಬಿಜೆಪಿ  ಕಾರಣವಿಲ್ಲದೆ ರಾಹುಲ್ ಅವರ ಬೆನ್ನು ಬೀಳುವ ಬದಲು ಪ್ರಮುಖ ವಿಚಾರಗಳತ್ತ ಗಮನ ನೀಡಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.

“ಯಾರದ್ದೋ ಸ್ನೇಹಿತರಾಗಿರುವುದು ಹಾಗೂ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಈ ದೇಶದಲ್ಲಿ ಇನ್ನೂ ಅಪರಾಧವಲ್ಲ''ಎಂದು ಅವರು ಹೇಳಿದರು.

“ಪ್ರಧಾನಿ ಮೋದಿ ಆಹ್ವಾನವಿಲ್ಲದೆ ಪಾಕಿಸ್ತಾನಕ್ಕೆ ಹೋದಂತೆ ರಾಹುಲ್ ಗಾಂಧಿ ಆಹ್ವಾನವಿಲ್ಲದೆ ಹೋಗಿಲ್ಲ. ರಾಹುಲ್ ಅವರು ನೇಪಾಳಕ್ಕೆ ಹೋಗಿ ಸ್ನೇಹಿತನ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ''ಎಂದು ಅವರು ಹೇಳಿದ್ದಾರೆ.

"ಸಾಮಾನ್ಯ ವ್ಯಕ್ತಿಯಂತೆ ರಾಹುಲ್ ಅವರು ಖಾಸಗಿ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸುವುದರಲ್ಲಿ ಏನು ತಪ್ಪಿದೆ.  ಬಿಜೆಪಿ ಪಕ್ಷ ಸುಳ್ಳುಗಳನ್ನು ಹರಡುತ್ತಿದೆ. ಅದಕ್ಕೆ ರಾಹುಲ್ ಅವರ ಬಗ್ಗೆ ಭಯವೇಕೆ, ನಾವೆಲ್ಲರೂ ಖಾಸಗಿ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲವೇ?’'ಎಂದು ಬಿಜೆಪಿಯನ್ನು ಟೀಕಿಸಿ ಕಾಂಗ್ರೆಸ್ ಸಂಸದ ಮಣಿಕ್ಕಂ ಠಾಗೋರ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕ ಅಮಿತ್ ಮಾಳವಿಯ ಟ್ವೀಟ್ ಮಾಡಿದ್ದ ವೀಡಿಯೊದಲ್ಲಿ ರಾಹುಲ್ ಗಾಂಧಿ ತಮ್ಮ ಸ್ನೇಹಿತರೊಂದಿಗೆ ಮಂದ ಬೆಳಕಿನ ಹಾಗೂ ಹಿನ್ನೆಲೆಯಲ್ಲಿ ದೊಡ್ಡ ದನಿಯಲ್ಲಿ ಸಂಗೀತ ಕೇಳಿಸುತ್ತಿದ್ದ ನೈಟ್ ಕ್ಲಬ್ ಒಂದರಲ್ಲಿರುವುದು ಕಾಣಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News