ಮಸೀದಿ ಧ್ವನಿವರ್ಧಕ ತೆರವುಗೊಳಿಸಬೇಕೆಂದು ರಾಜ್ ಠಾಕ್ರೆ ಎಚ್ಚರಿಕೆ : ಮಹಾರಾಷ್ಟ್ರ ಪೊಲೀಸ್ ಇಲಾಖೆ ಕಟ್ಟೆಚ್ಚರ

Update: 2022-05-03 10:33 GMT

ಮುಂಬೈ: "ಮಹಾರಾಷ್ಟ್ರದಲ್ಲಿರುವ ಎಲ್ಲಾ ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ಮೇ 3ರೊಳಗಾಗಿ ತೆರವುಗೊಳಿಸಬೇಕು,  ಹಾಗೆ ಮಾಡದೇ ಇದ್ದಲ್ಲಿ ನಂತರ ನಡೆಯುವ ಯಾವುದೇ ಘಟನೆಗೆ ನಾವು ಜವಾಬ್ದಾರಿ ಹೊರುವುದಿಲ್ಲ, ಧ್ವನಿವರ್ಧಕಗಳನ್ನು ತೆರವುಗೊಳಿಸದೇ ಇದ್ದಲ್ಲಿ ಮೇ 4ರಿಂದ ಎರಡು ಪಟ್ಟು ಹೆಚ್ಚು ದೊಡ್ಡ ದನಿಯಲ್ಲಿ ಹನುಮಾನ್ ಚಾಲಿಸಾ ನುಡಿಸಲಾಗುವುದು'' ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಹಿಂದಿನ ಎಚ್ಚರಿಕೆಯನ್ನು  ಔರಂಗಾಬಾದ್‍ನಲ್ಲಿ ಪುನರುಚ್ಛರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

"ಪೊಲೀಸ್ ಸಿಬ್ಬಂದಿಯ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆಯ 87 ಕಂಪನಿಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ, ರಾಜ್ಯಾದ್ಯಂತ 30,000 ಹೋಂಗಾರ್ಡ್‍ಗಳನ್ನೂ ನಿಯೋಜಿಸಲಾಗಿದೆ''ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ಮಹಾರಾಷ್ಟ್ರ ಡಿಜಿಪಿ ರಜನೀಶ್ ಸೇಠ್ ಹೇಳಿದರು.

"ಎಲ್ಲರೂ ಶಾಂತಿ ಕಾಪಾಡಬೇಕು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಪೊಲೀಸರು ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ, ರಾಜ್ ಠಾಕ್ರೆ ಅವರು ನೀಡಿರುವ ಭಾಷಣವನ್ನು ಪರಿಶೀಲಿಸಲಾಗುತ್ತಿದೆ ಹಾಗೂ ಅಗತ್ಯಬಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು''ಎಂದು ಅವರು ಹೇಳಿದ್ದಾರೆ.

"ಮಸೀದಿಗಳಲ್ಲಿ ಧ್ವನಿವರ್ಧಕದ ಬಳಕೆ ಕುರಿತು ಮಾತನಾಡಿದ್ದ ರಾಜ್ ಠಾಕ್ರೆ, ಉತ್ತರ ಪ್ರದೇಶ ಸರಕಾರ ಧ್ವನಿವರ್ಧಕಗಳನ್ನು ತೆರವುಗೊಳಿಸಬಹುದಾದರೆ ಮಹಾರಾಷ್ಟ್ರ ಸರಕಾರಕ್ಕೇಕೆ ಸಾಧ್ಯವಾಗಿಲ್ಲ'' ಎಂದು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News