ಧ್ವನಿವರ್ಧಕದ ಮೂಲಕ ಹನುಮಾನ್ ಚಾಲೀಸ ಪಠಿಸುವ ನಿರ್ಧಾರವನ್ನು ಪುನರುಚ್ಚರಿಸಿದ ರಾಜ್ ಠಾಕ್ರೆ

Update: 2022-05-04 04:24 GMT

ಮುಂಬೈ: ಮಹಾರಾಷ್ಟ್ರ ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸಲು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ನೀಡಿರುವ 'ಗಡುವು' ಮುಗಿದ ಹಿನ್ನೆಲೆಯಲ್ಲಿ ನೇರವಾಗಿ ಸರ್ಕಾರದ ಜತೆ ಸಂಘರ್ಷಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈ ಮೊದಲೇ ಘೋಷಿಸಿದಂತೆ ಧ್ವನಿವರ್ಧಕದ ಮೂಲಕ ಹನುಮಾನ್ ಚಾಲೀಸ ಪಠಿಸುವ ತಮ್ಮ ನಿರ್ಧಾರವನ್ನು ರಾಜ್ ಠಾಕ್ರೆ ಪುನರುಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಸೋದರ ಸಂಬಂಧಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಪೊಲೀಸ್ ಸಿಬ್ಬಂದಿಯ ರಜೆಗಳನ್ನು ರದ್ದುಪಡಿಸಲಾಗಿದ್ದು, ದೊಡ್ಡ ಸಂಖ್ಯೆಯ ಗೃಹರಕ್ಷಕರನ್ನು ಕೂಡಾ ನಿಯೋಜಿಸಲಾಗಿದೆ.

ಎಲ್ಲ ಸೂಕ್ಷ್ಮ ಪ್ರದೇಶಗಳ ಸುತ್ತ ಪಡೆಗಳನ್ನು ನಿಯೋಜಿಸಲಾಗಿದೆ. ಶಾಂತಿಗೆ ಭಂಗ ತರಲು ಯತ್ನಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಧ್ವನಿವರ್ಧಕಗಳನ್ನು ತೆರವುಗೊಳಿಸದ ಮಸೀದಿಗಳ ಮುಂದೆ ಧ್ವನಿವರ್ಧಕ ಮೂಲಕ ಹನುಮಾನ್ ಚಾಲೀಸ ಪಠಿಸುವ ತಮ್ಮ ಯೋಜನೆಯನ್ನು ಪುನರುಚ್ಚರಿಸಿ ಮಂಗಳವಾರ ಸಂಜೆ ರಾಜ್ ಠಾಕ್ರೆ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಈ ಸಂಘರ್ಷ ವಿಶೇಷ ಮಹತ್ವ ಪಡೆದಿದೆ. ಭಾರತದ ಅತ್ಯಂತ ಶ್ರೀಮಂತ ಎನಿಸಿದ ಬೃಹತ್‌ ಮುಂಬೈ ಮಹಾನಗರ ಪಾಲಿಕೆಯನ್ನು ವಶಪಡಿಸಿಕೊಳ್ಳಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಏತನ್ಮಧ್ಯೆ ಎಂಎನ್‍ಎಸ್ ಪಕ್ಷ ಬಿಜೆಪಿಯ 'ಬಿ ತಂಡ' ಎಂದು ಶಿವಸೇನೆ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News