ಹೆನ್ನಾಬೈಲ್ : ಈದುಲ್ ಫಿತ್ರ್ ಸಂಭ್ರಮ
ಹೆನ್ನಾಬೈಲ್ : ಸಮುದಾಯಗಳ ನಡುವಿನ ಸಾಮರಸ್ಯವು ಜಾಗತಿಕವಾದ ಧಾರ್ಮಿಕ, ರಾಜಕೀಯ, ಸಾಮಾಜಿಕ ವಲಯಗಳ ಆದ್ಯತೆಯ ವಿಷಯವಾಗಬೇಕು. ಭಿನ್ನಮತ- ಭಿನ್ನಾಭಿಪ್ರಾಯಗಳು ಕುಟುಂಬ ಮಟ್ಟದಿಂದ ಹಿಡಿದು ವಿಶ್ವಮಟ್ಟದ ವ್ಯವಸ್ಥೆಗಳವರೆಗೆ ಸಾಮಾನ್ಯ ಮತ್ತು ನಿರಂತರ ಎನ್ನುವ ಪ್ರಜ್ಞೆ ಸರ್ವರಲ್ಲೂ ಮೂಡಬೇಕು ಎಂದು ಧರ್ಮಗುರು ಷಾ ಆಲಂ ಹೆನ್ನಾಬೈಲ್ ಈದ್ಗಾ ಮೈದಾನದಲ್ಲಿ ಈದ್ ಪ್ರಾರ್ಥನೆಯ ನೇತೃತ್ವ ವಹಿಸಿ ಹೇಳಿದರು.
ನಂತರ ಮಾತನಾಡಿದ ಅವರು, ಜೀವರಾಶಿಗಳಲ್ಲೇ ಶ್ರೇಷ್ಠವೆಂದು ಪರಿಗಣಿತವಾದ ಸೀಮಾತೀತ ಮತ್ತು ಧರ್ಮಾತೀತವಾದ ವಿಶಾಲ ಮಾನವ ಸಮುದಾಯವನ್ನು ಧರ್ಮ, ವರ್ಣ, ಜಾತಿ, ಭಾಷೆ, ಪ್ರದೇಶ, ಪರಂಪರೆಗಳ ವೈವಿಧ್ಯತೆಗಳ ನಡುವೆಯೂ ಏಕತೆಯ ಸೂತ್ರದಡಿಯಲ್ಲಿ ತರಬಲ್ಲ ಪ್ರಭಾವಿ ನಾಯಕತ್ವ ಈ ಪ್ರಕ್ಷುಬ್ಧ ಜಗತ್ತಿಗೆ ಅಗತ್ಯವಾಗಿಬೇಕಿದೆ.
ಮುಸ್ಲಿಮನಾದವನು ಬರೀ ಮುಸಲ್ಮಾನನಿಗೆ ಮಾತ್ರವಲ್ಲ ಜಾಗತಿಕ ಜೀವಸಂಕುಲದ ಸುಲಲಿತ ಬದುಕಿಗೆ ಪೂರಕ-ಪ್ರೇರಕನಾಗಿ ಸದಾಕಾಲ ಬದುಕಬೇಕು. ತನ್ನ ಸ್ವಹಿತಾಸಕ್ತಿಗಳಿಗೆ ಬೇಕಾಗಿ ಸುತ್ತಲಿನ ಸರ್ವ ರೀತಿಯ ಸಂಬಂಧ ಸಾಂಗತ್ಯಗಳ ಬಗ್ಗೆ ಸಂವೇದನೆ ಇಲ್ಲದವನು ಯಾವ ಕಾಲಕ್ಕೂ ಮತ್ತು ಕಾರಣಕ್ಕೂ ಮುಸ್ಲಿಮನಾಗಲಾರ. ರಮಝಾನ್ ತಿಂಗಳ ಉಪವಾಸದಿಂದಾಗಿ ಜಾಗತಿಕ ಶಾಂತಿ, ಸಹೋದರತೆಗಳ ಬದ್ಧತೆಯು ಇನ್ನಷ್ಟು ಹೆಚ್ಚಾಗಬೇಕು. ಆರಾಧನೆಯಿಂದಾಗಿ ಆತ್ಮಸಂಯಮ, ದಯೆ ಮತ್ತು ದಾನಗಳ ಮಹತ್ವ ಅರಿಯದಿದ್ದರೆ ಅಂತಹ ಆರಾಧನೆಯು ಸರ್ವಶಕ್ತನ ಸನ್ನಿಧಿಯಲ್ಲಿ ಪರಿಗಣಿತವಲ್ಲ ಎಂಬ ಸಾಮಾನ್ಯ ಜ್ಞಾನ ಸರ್ವರಲ್ಲೂ ಮೂಡಬೇಕು ಎಂದು ಷಾ ಆಲಂ ಅವರು ಹೇಳಿದರು.
ಈ ಸಂದರ್ಭ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಹಸನ್ ಸಾಹೇಬ್, ಮಾಜಿ ಅಧ್ಯಕ್ಷ ಸಯ್ಯದ್ ಅಬ್ಬಾಸ್, ಮುಷ್ತಾಕ್ ಹೆನ್ನಾಬೈಲ್, ರಫೀಕ್ ಯೂನಿವರ್ಸಿಟಿ, ಹಯಾತ್ ಬಾಷಾ, ಇಬ್ರಾಹಿಮ್ ಸಯ್ಯದ್, ಶಬ್ಬೀರ್ ಸಾಹೇಬ್, ಅಶ್ಫಾಕ್ ಸಾಬ್ಜನ್, ಅಮಾನ್ ಜಮಾಲ್, ಬಾವಾ ಸಾಹೇಬ್ ಮುಂತಾದವರು ಉಪಸ್ಥಿತರಿದ್ದರು.