×
Ad

ಗರ್ಭಪಾತ ವಿರೋಧಿಸಿ 1000 ಅಡಿ ಎತ್ತರದ ಗೋಪುರ ಹತ್ತಿದ ಯುವಕ

Update: 2022-05-04 22:46 IST
PHOTO COURTESY:TWITTER

ವಾಷಿಂಗ್ಟನ್, ಮೇ 4: ಗರ್ಭಪಾತವನ್ನು ವಿರೋಧಿಸಿ ಕಾರ್ಯಕರ್ತನೊಬ್ಬ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ 1000 ಅಡಿ ಎತ್ತರದ ಗೋಪುರವನ್ನು ಯಾವುದೇ ರಕ್ಷಣಾ ವ್ಯವಸ್ಥೆಯಿಲ್ಲದೆ ಬರಿಗಾಲಲ್ಲಿ ಹತ್ತಿದ್ದು ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.

‘ಜೀವನದ ಪರವಾದ ಸ್ಪೈಡರ್‌ ಮ್ಯಾನ್’  ಎಂದು ತನ್ನನ್ನು ಕರೆಸಿಕೊಂಡಿರುವ 22 ವರ್ಷದ ಮೇಸನ್ ಡೆಶ್ಚಾಂಪ್ ಎಂಬಾತ ಮಂಗಳವಾರ 1070 ಅಡಿ ಎತ್ತರವಿರುವ ಸ್ಯಾನ್‌ಫ್ರಾನ್ಸಿಸ್ಕೋದ ಸೇಲ್ಸ್‌ ಫೋರ್ಸ್ ಕಟ್ಟಡದ ತುತ್ತತುದಿಯನ್ನು ಏರಿದ್ದಾನೆ. ಆರಂಭದಲ್ಲಿ ಈತನ ಕಾರ್ಯವನ್ನು ಯಾರೊಬ್ಬರೂ ಗಮನಿಸಿರಲಿಲ್ಲ. ಆದರೆ ಈತ ಹಗ್ಗ ಅಥವಾ ಇತರ ರಕ್ಷಣಾ ಸಲಕರಣೆಗಳಿಲ್ಲದೆ ಕಟ್ಟಡದ ಒಂದೊಂದೇ ಮಹಡಿಯನ್ನು ತಲುಪಿದೊಡನೆ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡುತ್ತಿದ್ದ. ಇದನ್ನು ಗಮನಿಸಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು. ಗರ್ಭಪಾತವನ್ನು ವಿರೋಧಿಸಿ ಹೀಗೆ ಮಾಡಿರುವುದಾಗಿ ಮೇಸನ್ ಹೇಳಿದ್ದಾನೆ. ಈತ ಬರಿಗಾಲಲ್ಲಿ ಗೋಪುರ ಏರುತ್ತಿರುವ ವೀಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ತನ್ನ ಕ್ಲಿನಿಕ್‌ನಲ್ಲಿ ಗರ್ಭಪಾತ ಮಾಡಿಸುತ್ತಿದ್ದ ವಾಷಿಂಗ್ಟನ್ ಡಿಸಿಯ ವೈದ್ಯ ಡಾ. ಸೀಸರ್ ಸ್ಯಾಂಟ್ಯಂಜೆಲೊ ಅವರನ್ನು ಖಂಡಿಸಿ, ಪ್ರತಿಭಟನೆ ಸಲ್ಲಿಸುವುದು ತನ್ನ ಕೃತ್ಯದ ಉದ್ದೇಶವಾಗಿದೆ. ಅವರು ತಡವಾದ ಗರ್ಭಪಾತದ ಮೂಲಕ ಹಲವು ಶಿಶುಗಳನ್ನು ಹತ್ಯೆ ಮಾಡಿದ್ದಾರೆ ಎಂದು ಮೇಸನ್ ಹೇಳಿದ್ದಾನೆ. ಡಾ. ಸೀಸರ್ ಅವರ ಕ್ಲಿನಿಕ್‌ನಲ್ಲಿ ಹೊರಭಾಗದಲ್ಲಿ ಕಳೆದ ತಿಂಗಳು 115 ಶಿಶುಗಳ ಭ್ರೂಣ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News