ಪರಸ್ಪರ ಒಪ್ಪಿಗೆಯಿದ್ದರೆ ಅಂತರ್‌ಧರ್ಮೀಯ ವಿವಾಹಗಳಿಗೆ ನಿಷೇಧವಿಲ್ಲ:ಎನ್‌ಸಿಎಂ
ಹೊಸದಿಲ್ಲಿ,ಮೇ 5: ‘ಲವ್ ಜಿಹಾದ್’ ಶಬ್ದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (ಎನ್‌ಸಿಎಂ)ದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲಪುರಾ ಅವರು,ದಂಪತಿಯ ಪರಸ್ಪರ ಒಪ್ಪಿಗೆಯೊಂದಿಗೆ ಅಂತರ್‌ಧರ್ಮೀಯ ವಿವಾಹಗಳಿಗೆ ನಿಷೇಧವಿಲ್ಲ ಎಂದು ಹೇಳಿದ್ದಾರೆ. ‘ಏನಿದು ಲವ್ ಜಿಹಾದ್’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ಲಾಲಪುರಾ,‘‘ಯಾವುದೇ ಶಬ್ದಕೋಶದಲ್ಲಿ ನಾನು ಈ ಶಬ್ದವನ್ನು ಕಂಡಿಲ್ಲ. ಯಾವುದೇ ನಿರ್ದಿಷ್ಟ ಸಮುದಾಯದಿಂದ ಇಂತಹ ‘ಲವ್ ಜಿಹಾದ್’ ಕುರಿತು ಯಾವುದೇ ದೂರನ್ನು ನಾನು ನೋಡಿಲ್ಲ. ನಾನು ಬಿಜೆಪಿಯ ಪ್ರತಿನಿಧಿ ಅಥವಾ ವಕ್ತಾರನಲ್ಲ. ಕೇವಲ ಬಿಜೆಪಿ ಮಾತ್ರ ‘ಲವ್ ಜಿಹಾದ್ ’ ಬಗ್ಗೆ ನಿಮಗೆ ಹೇಳಬಲ್ಲದು’’ ಎಂದರು.
ದೇಶದಲ್ಲಿ ‘ಲವ್ ಜಿಹಾದ್’ವಿರುದ್ಧ ಬಿಜೆಪಿಯ ಅಭಿಯಾನದ ಕುರಿತು ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ದಂಪತಿಯ ಪರಸ್ಪರ ಒಪ್ಪಿಗೆಯಿದ್ದರೆ ಅಂತರ್‌ಧರ್ಮೀಯ ವಿವಾಹಗಳಿಗೆ ನಿಷೇಧವಿಲ್ಲ. ಆದಾಗ್ಯೂ ತಮ್ಮ ಮಕ್ಕಳನ್ನು ಅಂತರ್‌ಧರ್ಮೀಯ ವಿವಾಹಗಳಿಗಾಗಿ ದಾರಿ ತಪ್ಪಿಸಲಾಗಿದೆ ಮತ್ತು ತಮ್ಮ ಒಪ್ಪಿಗೆಯಿಲ್ಲದೆ ಅವರನ್ನು ಕರೆದೊಯ್ಯಲಾಗಿದೆ ಎಂದು ಕೆಲವು ದೂರುಗಳು ಆಯೋಗಕ್ಕೆ ಬಂದಿವೆ. ಇವುಗಳ ಪೈಕಿ ಹೆಚ್ಚಿನವು ನಿಜ ಎಂದು ನಂತರ ಕಂಡುಬಂದಿದೆ. ಇಂತಹ ಪ್ರಕರಣಗಳನ್ನು ದೃಢೀಕರಣಕ್ಕಾಗಿ ಮತ್ತು ಮುಂದಿನ ಅಗತ್ಯ ಕ್ರಮಕ್ಕಾಗಿ ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಎಂದು ಲಾಲಪುರಾ ತಿಳಿಸಿದರು.