ಮಾವೋವಾದಿ ಸಿದ್ಧಾಂತದ ಪ್ರಚಾರಕ್ಕಾಗಿ ತೇಲ್ತುಂಬ್ಡೆ ವಿದೇಶಗಳಿಗೆ ಭೇಟಿ ನೀಡಿದ್ದರು:ಎನ್‌ಐಎ ಆರೋಪ

Update: 2022-05-05 18:53 GMT
PTI

ಹೊಸದಿಲ್ಲಿ,ಮೇ 5: ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ಆನಂದ ತೇಲ್ತುಂಬ್ಡೆಯವರು ನಿಷೇಧಿತ ಸಿಪಿಐ (ಮಾವೋವಾದಿ) ಸಿದ್ಧಾಂತದ ಪ್ರಚಾರಕ್ಕಾಗಿ ವಿದೇಶಗಳಿಗೆ ಭೇಟಿ ನೀಡುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಇಲ್ಲಿಯ ನ್ಯಾಯಾಲಯಕ್ಕೆ ತಿಳಿಸಿದೆ.

ತೇಲ್ತುಂಬ್ಡೆ ಶೈಕ್ಷಣಿಕ ಭೇಟಿಗಳ ನೆಪದಲ್ಲಿ ಕೆನಡಾ, ಪಾಕಿಸ್ತಾನ, ಅಮೆರಿಕ, ಫ್ರಾನ್ಸ್ ಇತ್ಯಾದಿ ದೇಶಗಳಲ್ಲಿ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದರು. ಈ ಸಮ್ಮೇಳನಗಳಲ್ಲಿ ಅವರು ಸಿಪಿಐ (ಮಾವೋವಾದಿ) ಸಿದ್ಧಾಂತ,ತರಬೇತಿ ಮತ್ತು ಕಾರ್ಯತಂತ್ರಗಳ ಕುರಿತು ಸಾಹಿತ್ಯವನ್ನು ಅಂತರರಾಷ್ಟ್ರೀಯ ಕಮ್ಯುನಿಸ್ಟ್ ಸಂಘಟನೆಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಎನ್‌ಐಎ ಆರೋಪಿಸಿದೆ. ಜಾಮೀನು ಕೋರಿ ತೇಲ್ತುಂಬ್ಡೆ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಎನ್‌ಐಎ ನ್ಯಾಯಾಲಯಕ್ಕೆ ಈ ಹೇಳಿಕೆಯನ್ನು ನೀಡಿದೆ.

ತಾನು ಸಿಪಿಐ (ಮಾವೋವಾದಿ) ಸದಸ್ಯ ಎನ್ನುವುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರವನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲು ಎನ್‌ಐಎ ವಿಫಲಗೊಂಡಿದೆ ಎಂದು ತೇಲ್ತುಂಬ್ಡೆ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.

ತೇಲ್ತುಂಬ್ಡೆ ಫಿಲಿಪ್ಪೀನ್ಸ್,ಪೆರು,ಟರ್ಕಿ ಮತ್ತು ಇತರ ದೇಶಗಳಿಂದ ಮಾವೋವಾದಿ ಸಿದ್ಧಾಂತಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ತರುತ್ತಿದ್ದರು ಎಂದು ಬುಧವಾರ ವಿಚಾರಣೆ ಸಂದರ್ಭ ಆರೋಪಿಸಿದ ಎನ್‌ಐಎ,

ಭಾರತದಲ್ಲಿಯ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಒಪ್ಪಿಗೆಯ ಬಳಿಕ ಇವುಗಳನ್ನು ಸಂಘಟನೆಯ ಸದಸ್ಯರ ತರಬೇತಿ ಮತ್ತು  ವ್ಯೂಹಾತ್ಮಕ ಬೆಳವಣಿಗೆಗಾಗಿ ಬಳಸಲಾಗುತ್ತಿತ್ತು ಎಂದು ಹೇಳಿದೆ.

ಸಿಪಿಐ (ಮಾವೋವಾದಿ) ಅಜೆಂಡಾಕ್ಕೆ ಒತ್ತು ನೀಡಲು ತೇಲ್ತುಂಬ್ಡೆಯವರ ಅಂತರರಾಷ್ಟ್ರೀಯ ಅಭಿಯಾನಗಳು ಮತ್ತು ಭೇಟಿಗಳಿಗಾಗಿ ಸಂಘಟನೆಯು ಅವರಿಗೆ 10 ಲ.ರೂ.ಗಳನ್ನು ಹಂಚಿಕೆ ಮಾಡಿರುವುದಕ್ಕೆ ಸಾಕ್ಷ್ಯಾಧಾರವಿದೆ ಎಂದು ಎನ್‌ಐಎ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News