ಉಕ್ಕು ಸ್ಥಾವರದಲ್ಲಿರುವ ಉಕ್ರೇನ್ ಸೈನಿಕರನ್ನು ಹತ್ಯೆಗೈಯಲು ರಶ್ಯದ ಸಿದ್ಧತೆ: ಉಕ್ರೇನ್ ಹೇಳಿಕೆ

Update: 2022-05-05 19:15 GMT

ಕೀವ್, ಮೇ 5: ಮರಿಯುಪೋಲ್‌ನ ಅಝೊವ್‌ಸ್ತಾಲ್ ಉಕ್ಕು ಸ್ಥಾವರದೊಳಗೆ ಉಳಿದುಕೊಂಡಿರುವ ಉಕ್ರೇನ್‌ನ ಸೈನಿಕರನ್ನು ಹತ್ಯೆ ಮಾಡಲು ನಿರ್ಧರಿಸಿರುವ ರಶ್ಯ, ಅಲ್ಲಿಂದ ಯಾರಿಗೂ ಹೊರತೆರಳಲು ಅವಕಾಶ ನೀಡುತ್ತಿಲ್ಲ ಎಂದು ಉಕ್ರೇನ್‌ನ ಅಧಿಕಾರಿಗಳು ಹೇಳಿದ್ದಾರೆ.

  ಬೃಹತ್ ಉಕ್ಕುಸ್ಥಾವರದೊಳಗೆ ನುಗ್ಗಿರುವ ರಶ್ಯನ್ ಯೋಧರು, ಅಲ್ಲಿಂದ ಹೊರಬರುವ ಮಾರ್ಗಗಳನ್ನು ಬಂದ್ ಮಾಡಿದ್ದಾರೆ. ಜತೆಗೆ ಅಝೋವ್‌ಸ್ತಾಲ್ ಪ್ರದೇಶದಲ್ಲಿನ ಉಕ್ರೇನ್ ಸೇನೆಯ ತುಕಡಿಯನ್ನು ನಾಶಗೊಳಿಸುವುದು ಅವರ ಉದ್ದೇಶವಾಗಿದೆ . ವಾಯುಸೇನೆಯ ನೆರವಿನಿಂದ ಆಕ್ರಮಣ ಮುಂದುವರಿಸಿರುವ ರಶ್ಯ, ಉಕ್ಕುಸ್ಥಾವರದ ಮೇಲೆ ನಿಯಂತ್ರಣ ಸಾಧಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಉಕ್ರೇನ್ ಸೇನೆ ಹೇಳಿದೆ. 2 ದಿನದ ನಿರಂತರ ಪ್ರಯತ್ನದ ಬಳಿಕ ರಶ್ಯದ ಸೈನಿಕರು ಉಕ್ಕುಸ್ಥಾವರದೊಳಗೆ ಪ್ರವೇಶಿಸಿದ್ದು ಅಲ್ಲಿ ಭೀಕರ ಕಾಳಗ ನಡೆಯುತ್ತಿದೆ . ಅಲ್ಲಿನ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ನಮಗಿಂತ ಅಧಿಕ ಸಂಖ್ಯೆಯಲ್ಲಿ ಶತ್ರುಸೈನಿಕರಿದ್ದಾರೆ. ಆದರೂ ಉಕ್ಕುಸ್ಥಾವರವನ್ನು ರಕ್ಷಿಸಿಕೊಳ್ಳುವ ನಮ್ಮ ಪ್ರಯತ್ನ ಮುಂದುವರಿಯುತ್ತಿದೆ ಎಂದು ಮರಿಯುಪೋಲ್‌ನ ಭದ್ರತೆಗೆ ನಿಯೋಜನೆಗೊಂಡಿರುವ ಉಕ್ರೇನ್ ಸೇನೆಯ ಕಮಾಂಡರ್ ಡೆನಿಸ್ ಪ್ರೊಕೊಪೆಂಕೊ ಹೇಳಿದ್ದಾರೆ.

ಮುತ್ತಿಗೆಗೆ ಒಳಗಾಗಿರುವ ಉಕ್ಕು ಸ್ಥಾವರದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರನ್ನು ಸುರಕ್ಷಿತವಾಗಿ ತೆರವುಗೊಳಿಸುವ ಉದ್ದೇಶದಿಂದ ಆ ಪ್ರದೇಶದಲ್ಲಿ ಕದನ ವಿರಾಮ ಜಾರಿಗೊಳಿಸಿರುವುದಾಗಿ ರಶ್ಯ ಬುಧವಾರ ಹೇಳಿಕೆ ನೀಡಿದೆ. ಈ ಮಧ್ಯೆ, ಮರಿಯುಪೋಲ್ ಉಕ್ಕುಸ್ಥಾವರದಲ್ಲಿ ಸಿಕ್ಕಿಬಿದ್ದಿರುವ ಮತ್ತು ಗಾಯಗೊಂಡಿರುವ ಸೈನಿಕರನ್ನು ಅಲ್ಲಿಂದ ತೆರವುಗೊಳಿಸಲು ನೆರವಾಗುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯೊ ಗುಟೆರಸ್‌ರನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಮನವಿ ಮಾಡಿಕೊಂಡಿದ್ದಾರೆ. ಸ್ಥಾವರದೊಳಗೆ ನಮ್ಮ ಸೈನಿಕರಷ್ಟೇ ಅಲ್ಲ, ಮಹಿಳೆಯರು, ಮಕ್ಕಳೂ ಇದ್ದಾರೆ. ಅವರನ್ನು ರಕ್ಷಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ರಶ್ಯದ ದಾಳಿಯಲ್ಲಿ ಕುಸಿದು ಬಿದ್ದಿರುವ ಸ್ಥಾವರದ ಒಂದುಬದಿಯ ಗೋಡೆಯ ಅವಶೇಷಗಳಡಿ ಕೆಲವರು ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ. ಆದರೆ ಕಟ್ಟಡದ ಅವಶೇಷಗಳನ್ನು ಯಂತ್ರ ಬಳಸಿ ತೆರವುಗೊಳಿಸಲು ಸಾಧ್ಯವಾಗದ ಕಾರಣ ನಮ್ಮ ಯೋಧರು ಈ ಕೆಲಸದಲ್ಲಿ ತೊಡಗಿದ್ದಾರೆ ಎಂದವರು ಹೇಳಿದ್ದಾರೆ.

ದಕ್ಷಿಣ ಉಕ್ರೇನ್‌ನ ಪ್ರಮುಖ ಬಂದರು ನಗರ ಮರಿಯುಪೋಲ್‌ನಿಂದ ನಾಗರಿಕರನ್ನು ಸ್ಥಳಾಂತರಿಸಲು ವಿಶ್ವಸಂಸ್ಥೆ ಹಾಗೂ

 ರೆಡ್‌ಕ್ರಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯ ಮುಂದುವರಿಸುವಂತೆ ಮರಿಯುಪೋಲ್ ಮೇಯರ್ ವ್ಯಾಡಿಮ್ ಬೊಯ್ಶೆಂಕೊ ಮನವಿ ಮಾಡಿದ್ದಾರೆ. ಈಗ ಮರಿಯುಪೋಲ್‌ನ ಪ್ರತಿಯೊಬ್ಬ ನಾಗರಿಕರ ಸುರಕ್ಷತೆಗಾಗಿ ನಾವು ಹೋರಾಡುತ್ತಿದ್ದೇವೆ. ಬುಧವಾರ ಮರಿಯುಪೋಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಇನ್ನೂ 344 ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News