ಭಾರತದಲ್ಲಿ ಕೋವಿಡ್ ನಿಂದ 47 ಲಕ್ಷ ಮಂದಿ ಮೃತಪಟ್ಟಿದ್ದಾರೆ: ಡಬ್ಲ್ಯೂಎಚ್‍ಓ

Update: 2022-05-06 01:43 GMT
ಫೈಲ್‌ ಫೋಟೊ

ಹೊಸದಿಲ್ಲಿ: ಭಾರತದಲ್ಲಿ 2020 ಮತ್ತು 2021ರಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ 47 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ಇದು ಡಬ್ಲ್ಯೂಎಚ್‍ಓ ಮತ್ತು ಭಾರತ ಸರ್ಕಾರದ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ಅಂದಾಜನ್ನು ಅಲ್ಲಗಳೆದಿರುವ ಭಾರತ ಡಬ್ಲ್ಯೂಎಚ್‍ಓ ಅಧ್ಯಯನ ವಿಧಾನವೇ ದೋಷಪೂರಿತ ಎಂದು ದೂರಿದೆ. ಮಾಹಿತಿಯ ಮೂಲಕ ನಿಖರವಲ್ಲ ಹಾಗೂ ಮಾನದಂಡ ಅಸಮಂಜಸ ಎನ್ನುವುದು ಸರ್ಕಾರದ ವಾದ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ ಅಂದಾಜು, ಭಾರತ ಸರ್ಕಾರ ಪ್ರಕಟಿಸಿದ ಅಧಿಕೃತ ಸಾವಿನ ಸಂಖ್ಯೆಯಾದ 4.84 ಲಕ್ಷದ ಹತ್ತು ಪಟ್ಟು ಅಧಿಕ. ಜಾಗತಿಕವಾಗಿ ಅಧಿಕೃತ ಅಂಕಿ ಅಂಶಗಳ ಎರಡು ಪಟ್ಟು ಮಂದಿ ಸೋಂಕಿನಿಂದ ಮೃಪಟ್ಟಿದ್ದಾರೆ ಎಂದು ಡಬ್ಲ್ಯೂಎಚ್‍ಓ ಪ್ರಕಟಿಸಿದ ಹೊಸ ವರದಿಯಲ್ಲಿ ವಿವರಿಸಲಾಗಿದೆ. ಈ ವರದಿಯ ಪ್ರಕಾರ ವಿಶ್ವಾದ್ಯಂತ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ 14.9 ದಶಲಕ್ಷ. ದೇಶಗಳು ಅಧಿಕೃತವಾಗಿ ವರದಿ ಮಾಡಿರುವ ಸಾವಿನ ಸಂಖ್ಯೆ 60 ಲಕ್ಷ.

ನಿಖರವಾದ ಅಂಕಿ ಅಂಶಗಳು ಲಭ್ಯವಿದ್ದರೂ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಗಣಿತ ಮಾದರಿಯನ್ನು ಬಳಸಿರುವುದು ಕಳವಳಕಾರಿ ಎಂದು ಭಾರತ ವರದಿಯನ್ನು ಕಟುವಾಗಿ ಟೀಕಿಸಿದೆ. ಈ ಅಧ್ಯಯನಕ್ಕೆ ಬಳಸಿದ ಅಂಕಿ ಅಂಶಗಳ ಮೂಲ, ವಿಸ್ತೃತ ಅಂದಾಜಿಗೆ ಆಯ್ಕೆ ಮಾಡಿರುವ ರಾಜ್ಯಗಳ ಬಗ್ಗೆಯೂ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನ ವರದಿ ಅಪಾರದರ್ಶಕ ಎಂದು ಭಾರತ ಟೀಕಿಸಿದೆ.

ಭಾರತದ ಆತಂಕವನ್ನು ಸಮರ್ಪಕವಾಗಿ ಬಗೆಹರಿಸದೇ ಮತ್ತು ಈ ಮಾಡೆಲಿಂಗ್ ಅಧ್ಯಯನ ಪ್ರಕ್ರಿಯೆ, ವಿಧಾನ ಮತ್ತು ಫಲಿತಾಂಶ ಭಾರತ ಸರ್ಕಾರದ ಆಕ್ಷೇಪದ ಹೊರತಾಗಿಯೂ ಡಬ್ಲ್ಯುಎಚ್‍ಓ ಈ ವರದಿ ಬಿಡುಗಡೆ ಮಾಡಿದೆ ಎಂದು ಭಾರತ ಆಕ್ಷೇಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News