ಜಮ್ಮು- ಕಾಶ್ಮೀರ ವಿಧಾನ ಸಭೆ ಸದಸ್ಯ ಬಲ 90ಕ್ಕೆ ಹೆಚ್ಚಳ

Update: 2022-05-06 02:14 GMT
ಫೈಲ್‌ ಫೋಟೊ

ಹೊಸದಿಲ್ಲಿ: ಜಮ್ಮು ಕಾಶ್ಮೀರ ಕ್ಷೇತ್ರ ಪುನರ್ ವಿಂಗಡಣೆ ಆಯೋಗ ತನ್ನ ಅಂತಿಮ ಕ್ಷೇತ್ರ ಪುನರ್ ವಿಂಗಡಣೆ ಆದೇಶವನ್ನು ಗುರುವಾರ ಅಧಿಸೂಚನೆ ರೂಪದಲ್ಲಿ ಪ್ರಕಟಿಸಿದೆ. ಈ ಕೇಂದ್ರಾಡಳಿತ ಪ್ರದೇಶದ 13 ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳ ಗಡಿಯನ್ನು ಬದಲಿಸಲಾಗಿದೆ.

13 ಕ್ಷೇತ್ರಗಳ ಗಡಿಯನ್ನು ಪರಿಷ್ಕರಿಸಲಾಗಿದ್ದು, 2022ರ ಮಾರ್ಚ್‍ನಲ್ಲಿ ಪ್ರಕಟಿಸಿದ್ದ ಕರಡು ಪುನರ್ ವಿಂಗಡಣೆ ಪ್ರಸ್ತಾವಕ್ಕೆ ಹೋಲಿಸಿದರೆ 21 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಟ್ವಾರಿ ಸರ್ಕಲ್ ಅಥವಾ ತಹಸೀಲ್‍ಗಳನ್ನು ಸೇರಿಸಲಾಗಿದೆ. ಹಿಂದೆ ಇದ್ದ ಸದಸ್ಯ ಬಲಕ್ಕೆ ಹೋಲಿಸಿದರೆ ಏಳು ಸ್ಥಾನ ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ಜಮ್ಮು ಕಾಶ್ಮೀರ ವಿಧಾನಸಭೆ ಸದಸ್ಯ ಬಲ 90ಕ್ಕೆ ಏರಲಿದೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿ ಈ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹಾಗೂ ಜಮ್ಮು - ಕಾಶ್ಮೀರ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಕೆ.ಕೆ.ಶರ್ಮಾ ಅವರನ್ನು ಒಳಗೊಂಡ ಸಮಿತಿ, ಸಾರ್ವಜನಿಕ ಸಲಹೆ ಮತ್ತು ಆಕ್ಷೇಪಗಳು ಹಾಗೂ ರಾಜಕೀಯ ಪಕ್ಷಗಳ ಮನವಿಯನ್ನು ಪರಿಗಣಿಸಿ ಅಂತಿಮ ವರದಿ ಸಿದ್ಧಪಡಿಸಿದೆ.

ಎರಡು ವರ್ಷ ಎರಡು ತಿಂಗಳ ಅವಧಿಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದೇಶವನ್ನು ಅಂತಿಮಗೊಳಿಸಲಾಗಿದ್ದು, ಗುರುವಾರ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಹಾಗೂ ಇತರ ಸದಸ್ಯರು ಪುನರ್ ವಿಂಗಡಣೆ ಆದೇಶಕ್ಕೆ ಸಹಿ ಮಾಡಿದರು. 2022ರ ಮಾರ್ಚ್‍ನಲ್ಲಿ ಪ್ರಕಟಿಸಿದ ಕರಡು ಪುನರ್ ವಿಂಗಡಣೆಗೆ ಹೋಲಿಸಿದರೆ ಜಮ್ಮು ವಿಭಾಗದಲ್ಲಿ 7 ಹಾಗೂ ಕಾಶ್ಮೀರ ವಿಭಾಗದಲ್ಲಿ 6 ಕ್ಷೇತ್ರಗಳ ಗಡಿ ಬದಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News