ದಲಿತರ ಪರ ಧ್ವನಿ ಎತ್ತುವುದು ಗುಜರಾತ್‍ನಲ್ಲಿ ಅಪರಾಧ: ಜಿಗ್ನೇಶ್ ಶಿಕ್ಷೆಗೆ ಕಾಂಗ್ರೆಸ್ ಆಕ್ರೋಶ

Update: 2022-05-06 04:51 GMT
ಜಿಗ್ನೇಶ್ ಮೇವಾನಿ

ಹೊಸದಿಲ್ಲಿ : ಪೊಲೀಸ್ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಗುಜರಾತ್ ಶಾಕಸ ಜಿಗ್ನೇಶ್ ಮೇವಾನಿ ಅವರಿಗೆ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶಿಕ್ಷೆ ವಿಧಿಸಿದ ಬೆನ್ನಲ್ಲೇ, ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.

"ನಾವು ಯಾವುದಕ್ಕೂ ಬಗ್ಗುವುದಿಲ್ಲ ಅಥವಾ ಹೆದರುವುದಿಲ್ಲ ಎಂದು ಈ ಸೊಕ್ಕಿನ ಆಡಳಿತಗಾರರು" ತಿಳಿದು ಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

ಮೇವಾನಿಯವರನ್ನು ತಪ್ಪಿತಸ್ಥರೆಂದು ಘೋಷಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಟೀಕಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, "ಗುಜರಾತ್‍ನಲ್ಲಿ ದಲಿತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು, ಅವರ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಮತ್ತು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಭೂಮಿಗಾಗಿ ನ್ಯಾಯಪರ ಪಾದಯಾತ್ರೆ ಕೈಗೊಳ್ಳುವುದು ಅಪರಾಧವೇ?" ಎಂದು ಪ್ರಶ್ನಿಸಿದ್ದಾರೆ.

"ಕೆಲ ವ್ಯಕ್ತಿಗಳು ದಶಕಗಳಿಂದ ಅಕ್ರಮವಾಗಿ ದಲಿತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಅದನ್ನು ಮರಳಿಸುವಂತೆ ಕೇಳಿದ್ದು ಅಪರಾಧವಾಗಿ ಪರಿಣಮಿಸಿದೆ. ಮೋದಿಯವರ ಗುಜರಾತ್‍ನಲ್ಲಿ ಇದು ಅಪರಾಧವಾಗಿ ಮಾರ್ಪಟ್ಟಿದೆ. ಇದು ಗಾಂಧೀಜಿಯವರ ಗುಜರಾತ್‍ನಲ್ಲಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಗುಜರಾತ್‍ನಲ್ಲಿ ಅಪರಾಧವಾಗದು. ಏಕೆಂದರೆ ಗುಜರಾತ್ ನ್ಯಾಯಪರವಾದ ಭೂಮಿ. ಇಂಥ ನೆಲದಲ್ಲಿ ದಲಿತರ ಭೂಮಿಗಾಗಿ ಹೋರಾಟ ನಡೆಸಿದ ಜಿಗ್ನೇಶ್ ಮೇವಾನಿಯವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ" ಎಂದು ಸುರ್ಜೇವಾಲಾ ಹೇಳಿದರು.

"ನಾವು ಯಾವುದಕ್ಕೂ ಬಗ್ಗುವುದಿಲ್ಲ ಅಥವಾ ಹೆದರುವುದಿಲ್ಲ ಎನ್ನುವುದನ್ನು ಸೊಕ್ಕಿನ ಆಡಳಿತಗಾರರು ತಿಳಿದುಕೊಳ್ಳಬೇಕು. ದಲಿತರ ಧ್ವನಿ ಮತ್ತು ಅವರ ನ್ಯಾಯಕ್ಕಾಗಿ ಮಾಡುವ ಆಗ್ರಹ ಅಪರಾಧ ಎನಿಸುವುದಾದರೆ, ಜಿಗ್ನೇಶ್ ಮೇವಾನಿ ಸೇರಿದಂತೆ ನಾವು ಈ ಅಪರಾಧವನ್ನು ಪದೇ ಪದೇ ಮಾಡುತ್ತೇವೆ" ಎಂದು ಹೇಳಿದರು.

ಗುಜರಾತ್‍ನ ಮೆಹಸಾನ ಪಟ್ಟಣದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಐದು ವರ್ಷ ಹಳೆಯ ಪ್ರಕರಣದಲ್ಲಿ ಮೇವಾನಿ ಮತ್ತು ಇತರ ಒಂಬತ್ತು ಮಂದಿಗೆ, ಪೊಲೀಸ್ ಅನುಮತಿ ಇಲ್ಲದೇ ಪ್ರತಿಭಟನಾ ರ್ಯಾಲಿ ನಡೆಸಿದ್ದಕ್ಕೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News