ಅರವಿಂದ ಕೇಜ್ರಿವಾಲ್ ಗೆ ಬೆದರಿಕೆ ಹಾಕಿದ್ದ ಬಿಜೆಪಿ ನಾಯಕನನ್ನು ಬಂಧಿಸಿದ ಪಂಜಾಬ್ ಪೊಲೀಸರು
ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ ಬೆದರಿಕೆ ಹಾಕಿದ್ದಕ್ಕಾಗಿ ದಿಲ್ಲಿ ಬಿಜೆಪಿ ನಾಯಕನೊಬ್ಬನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಪಂಜಾಬ್ ಪೊಲೀಸರು ಇಂದು ದಿಲ್ಲಿ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಬಂಧಿಸಿದ್ದಾರೆ ಎಂದು ಪಕ್ಷದ ಹಲವು ಮುಖಂಡರು ಆರೋಪಿಸಿದ್ದಾರೆ.
ಈ ಕುರಿತು ವೀಡಿಯೊದಲ್ಲಿ ಹೇಳಿಕೆ ನೀಡಿರುವ ದಿಲ್ಲಿ ಬಿಜೆಪಿ ವಕ್ತಾರ ನವೀನ್ ಕುಮಾರ್ ಅವರು ಸುಮಾರು 50 ಪೊಲೀಸರು ಬೆಳಿಗ್ಗೆ 8:30 ರ ಸುಮಾರಿಗೆ ಬಗ್ಗಾ ಅವರ ದಿಲ್ಲಿ ಮನೆಗೆ ನುಗ್ಗಿ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ರಾಜಕೀಯ ಎದುರಾಳಿಯನ್ನು ಗುರಿಯಾಗಿಸಲು ಪಂಜಾಬ್ ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಬಗ್ಗಾ ಅವರ ಬಂಧನವನ್ನು ಉಲ್ಲೇಖಿಸದೆ ಆರೋಪಿಸಿದರು.
"ನಿಮ್ಮನ್ನು ಬದುಕಲು ಬಿಡುವುದಿಲ್ಲ'' ಎಂದು ಬಗ್ಗಾ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಎಎಪಿ ನಾಯಕರೊಬ್ಬರು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಪಂಜಾಬ್ ಪೊಲೀಸರು ದಿಲ್ಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ದ್ವೇಷವನ್ನು ಉತ್ತೇಜಿಸುವುದು ಹಾಗೂ ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿಕೆ ಕುರಿತು ಬಿಜೆಪಿ ನಾಯಕರ ಟೀಕೆಗಳ ನಂತರ ಮೊಹಾಲಿ ನಿವಾಸಿ, ಆಪ್ ನಾಯಕ ಸನ್ನಿ ಅಹ್ಲುವಾಲಿಯಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.