×
Ad

ಈದ್ ಪಾರ್ಟಿಯಲ್ಲಿ ಬಿರಿಯಾನಿಯೊಂದಿಗೆ 1.45 ಲಕ್ಷ ರೂ.ಮೌಲ್ಯದ ಆಭರಣ ನುಂಗಿದ ಚೆನ್ನೈ ವ್ಯಕ್ತಿ !

Update: 2022-05-06 12:26 IST

ಚೆನ್ನೈ: ಚೆನ್ನೈನ 32 ವರ್ಷದ ವ್ಯಕ್ತಿಯೊಬ್ಬ ಮಂಗಳವಾರ ಈದ್ ಪಾರ್ಟಿಯಲ್ಲಿ ಬಿರಿಯಾನಿಯೊಂದಿಗೆ 1.45 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನುಂಗಿರುವ ವಿಚಿತ್ರ ಘಟನೆ ನಡೆದಿದೆ.  ವ್ಯಕ್ತಿಯ ಹೊಟ್ಟೆಯಲ್ಲಿದ್ದ ಆಭರಣಗಳನ್ನು  ಹೊರ ತೆಗೆಯಲು ವೈದ್ಯರು ಯಶಸ್ವಿಯಾಗಿದ್ದಾರೆ ಎಂದು India Today ವರದಿ ಮಾಡಿದೆ.

ಆಭರಣ ಅಂಗಡಿಯಲ್ಲಿ ಕೆಲಸ ಮಾಡುವ ಫಾತಿಮಾ   ತನ್ನ ಸ್ನೇಹಿತೆ ಹಾಗೂ ಸ್ನೇಹಿತೆಯ ಗೆಳೆಯನನ್ನು ಈದ್  ಹಬ್ಬದ ಹಿನ್ನೆಲೆಯಲ್ಲಿ ಮೇ 3 ರಂದು ಮನೆಗೆ  ಆಹ್ವಾನಿಸಿದ್ದರು.

ಗೆಳತಿಯ ಸ್ನೇಹಿತ  ಬಿರಿಯಾನಿಯ ಜೊತೆಗೆ 1.45 ಲಕ್ಷ ಮೌಲ್ಯದ ಚಿನ್ನಾಭರಣ ನುಂಗಿದ್ದಾನೆ. ಈ ಕೃತ್ಯ ಎಸಗುವಾಗ ಆತ ಪಾನಮತ್ತನಾಗಿದ್ದ ಎನ್ನಲಾಗಿದೆ.

ಭೋಜನ ಮುಗಿದು ಅತಿಥಿಗಳು ತೆರಳಿದ ಬಳಿಕ ಫಾತಿಮಾ  ತನ್ನ  ಬೀರುವಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಹಾಗೂ  ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದರು. ಮನೆಗೆ ಬಂದಿದ್ದ  ಅತಿಥಿಗಳನ್ನು ಪರಿಶೀಲಿಸಿದ ನಂತರ ತನ್ನ  ಸ್ನೇಹಿತೆಯ  ಗೆಳೆಯನೇ  ಚಿನ್ನಾಭರಣಗಳನ್ನು ಕದ್ದಿದ್ದಾನೆ ಎಂದು ಶಂಕಿಸಿ ಫಾತಿಮಾ ವಿರುಗಂಬಾಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬುಧವಾರ ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ  ಅಪರಾಧವನ್ನು ಒಪ್ಪಿಕೊಂಡನು. ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿದ ನಂತರ ಆಭರಣಗಳು ಹೊಟ್ಟೆಯಲ್ಲೇ ಇರುವುದು ದೃಢಪಟ್ಟಿದೆ.

ವೈದ್ಯರು ಆತನಿಗೆ ಎನಿಮಾ ನೀಡಿದ್ದು, ಗುರುವಾರ ಆತನಿಂದ 95,000 ರೂ.ಮೌಲ್ಯದ ಸರ ಹಾಗೂ 25,000 ರೂ.ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಆದಾಗ್ಯೂ, ಪೆಂಡೆಂಟ್ ಇನ್ನೂ ಅವನ ಹೊಟ್ಟೆಯೊಳಗೆ ಉಳಿದಿದೆ ಹಾಗೂ  ಅದನ್ನು ಹೊರ ತೆಗೆಯಲು ವೈದ್ಯರು ಆತನಿಗೆ ಔಷಧವನ್ನು  ನೀಡಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News