ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಕ್ರಮಕ್ಕೆ ಟ್ವಿಟರ್ ಗೆ ಎನ್ಸಿಪಿಸಿಆರ್ ಸೂಚನೆ

Update: 2022-05-06 14:53 GMT

ಹೊಸದಿಲ್ಲಿ,ಮೇ 6: ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ದೇಶಭಕ್ತಿ ಗೀತೆಯೊಂದನ್ನು ಹಾಡಿದ್ದ ಬಾಲಕನ ವಿಡಂಬನಾತ್ಮಕ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ವು ಟ್ವಿಟರ್ ಗೆ ಸೂಚಿಸಿದೆ.

ಕಾಮ್ರಾ ತನ್ನ ಸ್ವಂತ ರಾಜಕೀಯ ಅಜೆಂಡಾಕ್ಕೆ ಒತ್ತು ನೀಡಲು ವೀಡಿಯೊವನ್ನು ಬಳಸಿಕೊಂಡಿದ್ದು,ಅದನ್ನು ತಕ್ಷಣ ತೆಗೆಯುವಂತೆ ಆಯೋಗವು ಗುರುವಾರ ಟ್ವಿಟರ್ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಕಾಮ್ರಾರ ಟ್ವಿಟರ್ ಹ್ಯಾಂಡಲ್ ನಲ್ಲಿ ವೀಡಿಯೊ ಈಗ ಲಭ್ಯವಿಲ್ಲ. ಅದನ್ನು ಅವರೇ ಅಳಿಸಿದ್ದಾರೆಯೇ ಅಥವಾ ಟ್ವಿಟರ್ ತೆಗೆದುಹಾಕಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಈ ವಾರದ ಪೂರ್ವಾರ್ಧದಲ್ಲಿ ಜರ್ಮನಿಗೆ ಮೋದಿಯವರ ಭೇಟಿಯ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾಗಿದ್ದ ಬಾಲಕ ‘ಹೇ ಜನ್ಮಭೂಮಿ ಭಾರತ ’ ದೇಶಭಕ್ತಿ ಗೀತೆಯನ್ನು ಹಾಡಿದ್ದ. ಕಾಮ್ರಾ ಇದರ ಬದಲು ಪೀಪ್ಲಿ ಲೈವ್ ಚಿತ್ರದಲ್ಲಿಯ ಬೆಲೆಏರಿಕೆ ಕುರಿತ ‘ಮೆಹಂಗಾಯಿ ದಾಯೆಂ ಖಾಯೆ ಜಾತ ಹೈ ’ಹಾಡನ್ನು ಸೇರಿಸಿ ಎಡಿಟ್ ಮಾಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಟ್ವೀಟ್ ಮೂಲಕ ಕಾಮ್ರಾಗೆ ಪ್ರತಿಕ್ರಿಯಿಸಿದ್ದ ಬಾಲಕನ ತಂದೆ,‘ನಿಮ್ಮ ಕೊಳಕು ರಾಜಕೀಯದಿಂದ ಬಡ ಬಾಲಕನನ್ನು ದೂರವಿಡಿ ಮತ್ತು ನಿಮ್ಮ ಕಳಪೆ ಜೋಕ್ಗಳ ಮೇಲೆ ಕೆಲಸ ಮಾಡಲು ಪ್ರಯತ್ನಿಸಿ’ಎಂದು ತಿಳಿಸಿದ್ದರು.ರಾಜಕೀಯ ಸಿದ್ಧಾಂತಗಳ ಪ್ರಚಾರಕ್ಕಾಗಿ ಅಪ್ರಾಪ್ತ ವಯಸ್ಕರನ್ನು ಬಳಸಿಕೊಳ್ಳುವುದು ಬಾಲ ನ್ಯಾಯ ಕಾಯ್ದೆ,2015 ಹಾಗೂ ಮಾಹಿತಿ ತಂತ್ರಜ್ಞಾನ ನಿಯಮಗಳು,2021ರ ಉಲ್ಲಂಘನೆಯಾಗಿದೆ ಎಂದು ಟ್ವಿಟರ್ಗೆ ಬರೆದಿರುವ ಪತ್ರದಲ್ಲಿ ಆಯೋಗವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News