ಮಧ್ಯ ಪ್ರದೇಶ: ಈದ್ ಗೆ ಮುನ್ನಾದಿನ ಹಿಂದು ದೇವತೆಗಳ ವಿಗ್ರಹ ಅಪವಿತ್ರಗೊಳಿಸಿದ್ದ ಆರೋಪಿಯ ಬಂಧನ
ಬುರ್ಹಾನಪುರ,ಮೇ 6: ಮಧ್ಯಪ್ರದೇಶದ ಬುರ್ಹಾನಪುರದಲ್ಲಿ ಈದುಲ್ ಫಿತ್ರ್‌ನ ಮುನ್ನಾದಿನ ಹಿಂದು ದೇವತೆಗಳ ಎರಡು ವಿಗ್ರಹಗಳನ್ನು ಅಪವಿತ್ರಗೊಳಿಸಿದ್ದ ಆರೋಪದಲ್ಲಿ 28ರ ಹರೆಯದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
ರಾಜಘಾಟ್ ನಿವಾಸಿಯಾಗಿರುವ ಸತೀಶ ಚೌಹಾಣ ಬಂಧಿತ ಆರೋಪಿಯಾಗಿದ್ದು,ವೃತ್ತಿಯಲ್ಲಿ ಬಡಗಿಯಾಗಿದ್ದಾನೆ. ಈತ ಹನುಮಾನ ಮತ್ತು ರಾಮದೇವರ ವಿಗ್ರಹಗಳನ್ನು ಅಪವಿತ್ರಗೊಳಿಸಿದ್ದ ಎಂದು ಆರೋಪಿಸಲಾಗಿದೆ.ಜಿಲ್ಲೆಯಲ್ಲಿಯ ಶಾಂತಿಯುತ ವಾತಾವರಣವನ್ನು ಕದಡುವ ಆರೋಪಿಯ ಪ್ರಯತ್ನವನ್ನು ತಾವು ವಿಫಲಗೊಳಿಸಿದ್ದೇವೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ವಿಗ್ರಹಗಳನ್ನು ಅಪವಿತ್ರಗೊಳಿಸಿದ್ದ ವರದಿಗಳು ಹರಡಲಾರಂಭಿಸಿದ್ದು,ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ಘಟನೆಗೆ ಹೊಣೆಯಾಗಿ ಯಾವುದೇ ನಿರ್ದಿಷ್ಟ ಸಮುದಾಯವನ್ನು ಹೆಸರಿಸದಂತೆ ಸ್ಥಳೀಯ ನಿವಾಸಿಗಳು ಮತ್ತು ಬಿಜೆಪಿ ನಾಯಕರಿಗೆ ಸೂಚಿಸಿದ್ದರು.ವ್ಯಕ್ತಿಯೋರ್ವ ದೇವಸ್ಥಾನವನ್ನು ಪ್ರವೇಶಿಸಿದ್ದನ್ನು ಮತ್ತು ಅವಸರದಿಂದ ಅಲ್ಲಿಂದ ಹೊರಬಿದ್ದಿದ್ದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿದ್ದವು. ವ್ಯಕ್ತಿಯ ಶೋಧಕ್ಕಾಗಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ದೇವಸ್ಥಾನದಿಂದ ಕೇವಲ 500 ಮೀ.ದೂರದ ನಿವಾಸಿ ಚೌಹಾಣ ರಾತ್ರಿಯೇ ಪೊಲೀಸರ ಬಲೆಗೆ ಬಿದ್ದಿದ್ದ ಎಂದು ಎಸ್ಪಿ ರಾಹುಲ್ ಲೋಧಾ ತಿಳಿಸಿದರು.
ಕೋಮು ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಚೌಹಾಣ್ ಆಗಾಗ್ಗೆ ಅನಿಯಂತ್ರಿತವಾಗಿ ವರ್ತಿಸುತ್ತಾನೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾನೆ ಎಂದು ಆತನ ಕುಟುಂಬವು ಹೇಳಿದೆ. ಪೊಲೀಸರು ಆತನ ಕುಟುಂಬ ವೈದ್ಯರನ್ನು ವಿಚಾರಿಸಿದಾಗ,ಚೌಹಾಣ್ಗೆ ಯಾವುದೇ ಮಾನಸಿಕ ಕಾಯಿಲೆಯಿಲ್ಲ,ಆದರೆ,ವಿಶೇಷವಾಗಿ ಪತ್ನಿಯು ತನ್ನನ್ನು ತೊರೆದ ಬಳಿಕ ಆಗಾಗ್ಗೆ ಅನಿಯಂತ್ರಿತವಾಗಿ ವರ್ತಿಸುತ್ತಾನೆ ಎಂದು ಅವರು ತಿಳಿಸಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿಯ ಯಾವುದೇ ವದಂತಿಗಳಿಗೆ ಬಲಿಯಾಗದಂತೆ ಮತ್ತು ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವಂತೆ ಪೊಲೀಸರು ಜನರನ್ನು ಕೋರಿದ್ದಾರೆ.