ʼಇದು ಸೇಡಿನ ರಾಜಕಾರಣʼ: ಬಿಜೆಪಿ ನಾಯಕನ ಬಂಧನ ಪ್ರಶ್ನಿಸಿ ಆಪ್‌ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌ ಮುಖಂಡ ಸಿಧು

Update: 2022-05-06 13:36 GMT

ಅಮೃತ್‌ಸರ್/ದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸೋಮವಾರ ದೆಹಲಿ ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿರುವುದನ್ನು ಖಂಡಿಸಿದ್ದಾರೆ. ಬಗ್ಗಾ ಅವರ ಬಂಧನವನ್ನು ʼಸೇಡಿನ ರಾಜಕಾರಣʼ ಎಂದು ಬಣ್ಣಿಸಿದ ಸಿಧು, ಎಎಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಅರವಿಂದ್‌ ಕೇಜ್ರೀವಾಲ್‌ ಹಾಗೂ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ರನ್ನು ಟೀಕಿಸಿದ ಸಿಧು, ವೈಯಕ್ತಿಕ ಹಗೆತನಗಳಿಗೆ ಪಂಜಾಬ್‌ ಪೊಲೀಸರನ್ನು ಬಳಸುವುದು ಪಾಪ ಎಂದಿದ್ದಾರೆ.

ಸುಮಾರು 50 ಪಂಜಾಬ್ ಪೊಲೀಸರು ಬೆಳಿಗ್ಗೆ 8:30 ರ ಸುಮಾರಿಗೆ ಬಗ್ಗಾ ಅವರ ದೆಹಲಿ ಮನೆಗೆ ನುಗ್ಗಿ ಅವರನ್ನು ಬಂಧಿಸಿದ್ದಾರೆ ಎಂದು ದೆಹಲಿ ಬಿಜೆಪಿ ವಕ್ತಾರ ನವೀನ್ ಕುಮಾರ್ ಜಿಂದಾಲ್ ಹೇಳಿದ್ದಾರೆ. ಬಗ್ಗಾ "ಅವರು ತಮ್ಮ ಸಿಖ್‌ ಪೇಟವನ್ನು ಧರಿಸಲು ಕೂಡಾ ಅವಕಾಶ ನೀಡಲಿಲ್ಲ" ಎಂದು ಪೊಲೀಸರ ವಿರುದ್ಧ ಆರೋಪಿಸಲಾಗಿದೆ.

" ತಜೀಂದರ್ ಬಗ್ಗಾ ಬೇರೆ ಪಕ್ಷದವರಾಗಿರಬಹುದು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಪಂಜಾಬ್ ಪೊಲೀಸರ ಮೂಲಕ ವೈಯಕ್ತಿಕ ವಿಷಯಗಳನ್ನು ಇತ್ಯರ್ಥಪಡಿಸುವ  ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತಮಾನ್ ಅವರ ರಾಜಕೀಯ ದ್ವೇಷವು ಮಹಾಪಾಪವಾಗಿದೆ... ರಾಜಕೀಯ ಮಾಡುವ ಮೂಲಕ ಪಂಜಾಬ್ ಪೊಲೀಸರ ಪ್ರತಿಷ್ಠೆಯನ್ನು ಹಾಳು ಮಾಡುವುದನ್ನು ನಿಲ್ಲಿಸಿ." ಎಂದು ನವಜೋತ್ ಸಿಧು ಟ್ವೀಟ್ ಮಾಡಿದ್ದಾರೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿಯ ಜನಕಪುರಿಯಲ್ಲಿರುವ ತಮ್ಮ ಮನೆಗೆ ಕೆಲವರು ಬಂದು ತನ್ನ ಮಗನನ್ನು ಕರೆದುಕೊಂಡು ಹೋದರು ಎಂದು ಬಗ್ಗಾ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.

ಆದರೆ, ಬಗ್ಗಾ ಅವರನ್ನು ಪಂಜಾಬ್‌ಗೆ ಕರೆತರಲಾಗುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪಂಜಾಬ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಪಂಜಾಬ್ ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News