ಕಾಂಚನಜುಂಗಾ ಪರ್ವತ ಏರುವ ಪ್ರಯತ್ನದಲ್ಲಿ ಭಾರತದ ಪರ್ವತಾರೋಹಿ ನಿಧನ
ಕಠ್ಮಂಡು, ಮೇ 6: ವಿಶ್ವದ 3ನೇ ಅತೀ ಎತ್ತರದ ಶಿಖರ ಕಾಂಚನಜುಂಗಾ ಪರ್ವತವನ್ನು ಏರಲು ಪ್ರಯತ್ನಿಸಿದ ಭಾರತದ ಪರ್ವತಾರೋಹಿ ನಾರಾಯಣ ಅಯ್ಯರ್ ಗುರುವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.
ನೇಪಾಳದಲ್ಲಿರುವ ಹಿಮಾಲಯ ಶ್ರೇಣಿಯ ಪರ್ವತದ 8,200 ಮೀಟರ್ ಎತ್ತರದಲ್ಲಿ ನಾರಾಯಣ ಅಯ್ಯರ್ ಮೃತಪಟ್ಟಿದ್ದಾರೆ. ಪರ್ವತಾರೋಹಿಗಳ ತಂಡದಲ್ಲಿ ಇತರರಿಗಿಂತ ಅವರು ನಿಧಾನವಾಗಿ ಪರ್ವತ ಏರುತ್ತಿದ್ದರು. ಅವರಿಗೆ ನೆರವಾಗಲು ಇಬ್ಬರು ಗೈಡ್ಗಳನ್ನು ಒದಗಿಸಿದ್ದೆವು. ತುಂಬಾ ದಣಿದಿದ್ದ ಅವರು ಮುಂದುವರಿಯಲು ಸಾಧ್ಯವಾಗದೆ ಕುಸಿದು ಬಿದ್ದರು ಎಂದು ಪರ್ವತಾರೋಹಣವನ್ನು ಸಂಘಟಿಸಿದ್ದ ಪಯೊನಿರ್ ಅಡ್ವೆಂಚರ್ ಸಂಸ್ಥೆಯ ನಿವೇಶ್ ಕಾರ್ಕಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಅಯ್ಯರ್ ಮೃತಪಟ್ಟಿರುವ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು ಮೃತದೇಹವನ್ನು ಭಾರತಕ್ಕೆ ರವಾನಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ಹೇಳಿದ್ದಾರೆ. 8,586 ಮೀಟರ್ ಎತ್ತರದ ಕಾಂಚನಜುಂಗಾ ಪರ್ವತ ಏರುವ ಪ್ರಯತ್ನದಲ್ಲಿ ಈ ವರ್ಷ ಮೃತಪಟ್ಟವರಲ್ಲಿ ಅಯ್ಯರ್ 3ನೆಯವರಾಗಿದ್ದಾರೆ. ಚಾರಣಿಗರ ಮತ್ತು ಪರ್ವತಾರೋಹಿಗಳ ಸ್ವರ್ಗ ಎನಿಸಿರುವ ನೇಪಾಳದಲ್ಲಿ ವಿಶ್ವದ ಅತೀ ಎತ್ತರದ 8 ಪರ್ವತಗಳಿದ್ದು ಪ್ರತೀ ವರ್ಷ ನೂರಾರು ಪರ್ವತಾರೋಹಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.