ಮೇ 7ರಂದು ಬೆಳಪು ಉರೂಸ್; ಸರ್ವ ಧರ್ಮದ ವ್ಯಾಪಾರಿಗಳಿಗೆ ಉಚಿತ ಅವಕಾಶ

Update: 2022-05-06 16:40 GMT

ಪಡುಬಿದ್ರೆ : ಬೆಳಪುವವಿನಲ್ಲಿ ಮೇ 7ರಂದು ನಡೆಯುವ ಇತಿಹಾಸ ಪ್ರಸಿದ್ಧ ಸೂಫಿ ಅಬ್ದುಲ್ ರಹ್ಮಾನ್‌ ಶಾ ಬಾಬಾ  ದರ್ಗಾ ಉರೂಸ್‍ನಲ್ಲಿ ಸರ್ವಧರ್ಮೀಯ ವ್ಯಾಪಾರಿಗಳಿಗೆ ಉಚಿತ ಅವಕಾಶ ನೀಡುವ ಬಗ್ಗೆ ದರ್ಗಾ ಸಮಿತಿ ನಿರ್ಣಯಿಸಿರುವ ಮೂಲಕ ಮಾದರಿಯಾಗಿದೆ.

ಕೆಲವು ಜಾತ್ರೆ ಕಾರ್ಯಕ್ರಮಗಳಲ್ಲಿ ಇತರ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದೆ ಇರುವುದು ಬಗ್ಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಮಧ್ಯೆ ಉರೂಸ್‍ನಲ್ಲಿ ಎಲ್ಲಾ ಧರ್ಮದ ವ್ಯಾಪಾರಿಗಳಿಗೂ ಉಚಿತ ಅವಕಾಶ ನೀಡಿರುವುದು ವ್ಯಾಪಾಕ ಪ್ರಶಂಸೆಗೆ ಕಾರಣವಾಗಿದೆ.

ಬೆಳಪು  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ದರ್ಗಾದಲ್ಲಿ ರಾಜ್ಯದ ವಿವಿಧ ಕಡೆಯಿಂದ ಸಹಸ್ರಾರು  ಜನರ ಭಾಗವಹಿಸುವ  ನಿರೀಕ್ಷೆ ಇದೆ. ಈ ಬಗ್ಗೆ ದರ್ಗಾ ಸಮಿತಿಯು ವಿವಿಧ ಕಡೆಗಳಲ್ಲಿ ನಡೆಯುವ ಮತೀಯ ಸಂಘರ್ಷಕ್ಕೆ ಅವಕಾಶ  ನೀಡದೆ  ಸರ್ವ  ಧರ್ಮದ  ಬಡ  ವ್ಯಾಪಾರಿಗಳಿಗೆ  ವ್ಯಾಪಾರಕ್ಕೆ  ಉಚಿತ ಅವಕಾಶ  ಕಲ್ಪಿಸಿದೆ ಎಂದು ದರ್ಗಾ ಸಮಿತಿಯ ಝಹೀರ್ ತಿಳಿಸಿದ್ದಾರೆ.

ದರ್ಗಾ ಸಮಿತಿಯ ಈ ನಿರ್ಣಯವನ್ನು ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ‌ ದೇವಿಪ್ರಸಾದ್ ಶೆಟ್ಟಿ  ಬೆಳಪು ಮೆಚ್ಚುಗೆ ವ್ಯಕ್ತಪಡಿಸಿ, ದರ್ಗಾ ಸಮಿತಿಯ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಕೆಲವು ಕಡೆಗಳಲ್ಲಿ ನಡೆಯುವ ಧಾರ್ಮಿಕ ಸಂಘರ್ಷಕ್ಕೆ  ಶಾಂತಿ, ಸಾಮರಸ್ಯದ ಮೂಲಕ ನಾಂದಿ ಹಾಡಬೇಕಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News