ರಾಯಭಾರಿ ಕಚೇರಿ ಉದ್ಯೋಗಿ ಬ್ರಿಟಿಶ್ ಮಹಿಳೆಗೆ ಕ್ಲಬ್ ನಲ್ಲಿ ಲೈಂಗಿಕ ಕಿರುಕುಳ: ಆರೋಪಿ ಬಂಧನ

Update: 2022-05-06 18:27 GMT

ಮುಂಬೈ,ಮೇ 6: ಇಲ್ಲಿನ ಬ್ರಿಟನ್ ರಾಯಭಾರಿ ಕಚೇರಿಯಲ್ಲಿ ಉದ್ಯೋಗದಲ್ಲಿರುವ 44 ವರ್ಷದ ಬ್ರಿಟಿಶ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬಾಂದ್ರಾ ಉಪನಗರದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಂಗಳವಾರ ರಾತ್ರಿ 11:30ರ ವೇಳೆಗೆ ಬಾಂದ್ರಾ ಉಪನಗರದ ಕ್ಲಬ್ ಗೆ ಮಹಿಳೆಯು ತನ್ನ ಪತಿ ಹಾಗೂ ಆಪ್ತರೊಂದಿಗೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ.

ಮಹಿಳೆಯು ಕ್ಲಬ್ ನಲ್ಲಿರುವ ಶೌಚಗೃಹಕ್ಕೆ ತೆರಳಿದ್ದಾಗ, ಅಲ್ಲಿಗೆ ಬಂದ 35 ವರ್ಷದ ಆರೋಪಿಯು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದೆನ್ನಲಾಗಿದೆ. ಅಲ್ಲಿಂದ ವಾಪಸಾದ ಮಹಿಳೆಯು ತನ್ನ ಪತಿ ಹಾಗೂ ಸ್ನೇಹಿತರಿಗೆ ನಡೆದ ಘಟನೆಯನ್ನು ತಿಳಿಸಿದರು. ಕೂಡಲೇ ಅವರು ಅಲ್ಲಿಗೆ ಧಾವಿಸಿ, ಆರೋಪಿಯನ್ನು ಹಿಡಿದಿಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಘನಶ್ಯಾಮ್ ಲಾಲ್ಚಂದ್ ಯಾದವ್ ಎದು ಗುರುತಿಸಲಾಗಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 354 (ಮಹಿಳೆಯ ಮಾನಭಂಗದ ಉದ್ದೇಶದಿಂದ ಆಕೆಯ ಮೇಲೆ ಕ್ರಿಮಿನ್ ಸ್ವರೂಪ ಬಲ ಪ್ರಯೋಗ), 354ಎ (ಅಸ್ವೀಕಾರಾರ್ಹವಾದ ರೀತಿಯಲ್ಲಿ ದೈಹಿಕ ಸಂಪರ್ಕ) ಹಾಗೂ 509 (ಮಹಿಳೆಯ ಘನತೆಗೆ ಕುಂದು ತರುವ ಉದ್ದೇಶದಿಂದ ಅಸಭ್ಯ ಪದ ಬಳಕೆ, ವರ್ತನೆ ಅಥವಾ ಕೃತ್ಯವನ್ನು ಎಸಗುವುದು) ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆಯೆಂದು ಬಾಂದ್ರಾ ಉಪನಗರದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯು ಎಂಬಿಎ ಪದವೀಧರನಾಗಿದ್ದು, ಉದ್ಯೋಗ ನಿರತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News