ಮರಿಯುಪೋಲ್ ನಲ್ಲಿ ನರಕಸದೃಶ ಪರಿಸ್ಥಿತಿ: ವಿಶ್ವಸಂಸ್ಥೆ ಕಳವಳ
ಕೀವ್, ಮೇ 6: ರಶ್ಯ ಸೇನೆಯ ದಿಗ್ಬಂಧನಕ್ಕೆ ಒಳಗಾಗಿರುವ ಉಕ್ರೇನ್ ಬಂದರು ನಗರ ಮರಿಯುಪೋಲ್ ನಲ್ಲಿ ನರಕಸದೃಶ ಪರಿಸ್ಥಿತಿಯಿದ್ದು ಅಲ್ಲಿಂದ ಜನರನ್ನು ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಮರಿಯುಪೋಲ್ ನಗರದ ಮೇಲೆ ಕೆಲವು ವಾರಗಳಿಂದ ರಶ್ಯ ನಡೆಸಿದ ನಿರಂತರ ದಾಳಿಯಿಂದಾಗಿ ಆ ನಗರವನ್ನು ಬಹುತೇಕ ನಾಶಗೊಳಿಸಿದ್ದು ಎಲ್ಲೆಲ್ಲೂ ಕುಸಿದು ಬಿದ್ದಿರುವ ಮನೆ, ಕಟ್ಟಡಗಳ ಅವಶೇಷ ರಾಶಿಬಿದ್ದಿದೆ. ರಸ್ತೆ ಪಕ್ಕ, ಮನೆ ಬಳಿ ನಿಲ್ಲಿಸಿದ್ದ ವಾಹನಗಳು ಸುಟ್ಟುಹೋಗಿದ್ದು ಇನ್ನೂ ಹೊಗೆಯಾಡುತ್ತಿದೆ. ನಗರವಿಡೀ ಈಗ ಸ್ಮಶಾನಮೌನ ಆವರಿಸಿದೆ. ಆದರೆ, ನಗರದ ಮಧ್ಯದಲ್ಲಿರುವ ಅಝೊವ್ಸ್ತಲ್ ಉಕ್ಕು ಸ್ಥಾವರದೊಳಗೆ ಈಗಲೂ ಹಲವು ನಾಗರಿಕರು ಹಾಗೂ ಯೋಧರು ಆಶ್ರಯ ಪಡೆದಿದ್ದಾರೆ. ಈ ನರಕಸದೃಶ ಪರಿಸ್ಥಿತಿಯಿಂದ ಅವರನ್ನು ಸ್ಥಳಾಂತರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಗುಟೆರಸ್ ಹೇಳಿದ್ದಾರೆ.
ವಿಶ್ವಸಂಸ್ಥೆ ಮತ್ತು ರೆಡ್ಕ್ರಾಸ್ ಗುರುವಾರ ನಡೆಸಿದ 2 ಕಾರ್ಯಾಚರಣೆಯಲ್ಲಿ ಸ್ಥಾವರದೊಳಗಿನ ಸುಮಾರು 500 ಮಂದಿಯನ್ನು ತೆರವುಗೊಳಿಸಲಾಗಿದೆ. ಉಳಿದವರನ್ನೂ ಶೀಘ್ರ ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಸುರಕ್ಷಿತ ಸ್ಥಳಾಂತರಕ್ಕೆ ಅನುವು ಮಾಡಿಕೊಡುವಂತೆ ಉಭಯ ದೇಶಗಳಿಗೂ ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಮರಿಯುಪೋಲ್ ನರಕದಲ್ಲಿ ಇನ್ನೂ ಸಿಲುಕಿಕೊಂಡವರು ಸುರಕ್ಷಿತವಾಗಿ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿ ಅವರನ್ನು ಸ್ವಾಗತಿಸಲು ವಾಹನಗಳನ್ನು ರವಾನಿಸಲಾಗಿದೆ ಎಂದು ವಿಶ್ವಸಂಸ್ಥೆ ಮಾನವೀಯ ಉಪಕ್ರಮಗಳ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ ಟ್ವೀಟ್ ಮಾಡಿದ್ದಾರೆ.