ಇಬ್ಬರು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ಗೆ ಪದೋನ್ನತಿಗೊಳಿಸಲು ಕೊಲಿಜಿಯಂ ಶಿಫಾರಸು

Update: 2022-05-06 19:03 GMT

ಹೊಸದಿಲ್ಲಿ,ಮೇ 6: ಗುವಾಹಟಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸುಧಾಂಶು ಧುಲಿಯಾ ಮತ್ತು ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಜಮ್ಷೆಡ್ ಬುರ್ಜೋರ್ ಪರ್ದಿವಾಲಾ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.ಸರ್ವೋಚ್ಚ ನ್ಯಾಯಾಲಯವು ಹಾಲಿ 32 ನ್ಯಾಯಾಧೀಶರನ್ನು ಹೊಂದಿದೆ. ಧುಲಿಯಾ ಮತ್ತು ಪರ್ದಿವಾಲಾ ನೇಮಕದಿಂದ ಅದು 34 ನ್ಯಾಯಾಧೀಶರ ತನ್ನ ಪೂರ್ಣ ಸಾಮರ್ಥ್ಯವನ್ನು ಹೊಂದಲಿದೆ.2021,ಆಗಸ್ಟ್ನಿಂದೀಚಿಗೆ ಕೊಲಿಜಿಯಂ ಭಾರತದ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶರಾಗಲು ಸರದಿಯಲ್ಲಿರುವ ನ್ಯಾ.ಬಿ.ವಿ.ನಾಗರತ್ನಾ ಸೇರಿದಂತೆ 11 ಹೆಸರುಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗಾಗಿ ಶಿಫಾರಸು ಮಾಡಿದೆ.


ಮೇ 10ರಂದು ನ್ಯಾ.ವಿನೀತ ಸರನ್,ಜೂ.7ರಂದು ನ್ಯಾ.ಎಲ್.ನಾಗೇಶ್ವರ ರಾವ್ ಮತ್ತು ಜು.29ರಂದು ನ್ಯಾ.ಎ.ಎಂ.ಖನ್ವಿಲ್ಕರ್ ಅವರು ನಿವೃತ್ತರಾಗುತ್ತಿರುವುದರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನಷ್ಟು ಹುದ್ದೆಗಳು ಖಾಲಿಯಾಗಲಿವೆ. ಮುಖ್ಯ ನ್ಯಾಯಮೂರ್ತಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಯು.ಯು.ಲಲಿತ್ ಅವರೂ ಆಗಸ್ಟ್ ಮತ್ತು ನವಂಬರ್ ನಡುವೆ ನಿವೃತ್ತರಾಗಲಿದ್ದಾರೆ.
ನೇಮಕಗೊಂಡರೆ ಪರ್ದಿವಾಲಾ ಐದು ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಂಡ ಅಲ್ಪಸಂಖ್ಯಾತ ಸಮುದಾಯದ ಮೊದಲ ನ್ಯಾಯಾಧೀಶರಾಗಲಿದ್ದಾರೆ. ನ್ಯಾ.ಎಸ್.ಅಬ್ದುಲ್ ನಝೀರ್ ಅವರು 2017ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಂಡಿದ್ದರು.
1956,ಆ.12ರಂದು ಮುಂಬೈನಲ್ಲಿ ಜನಿಸಿದ ಪರ್ದಿವಾಲಾ ನ್ಯಾಯವಾದಿಗಳ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರ ತಂದೆ ಬುರ್ಜೋರ್ ಕಾವಾಸಜಿ ಪರ್ದಿವಾಲಾ ಅವರೂ ಅಲ್ಪಕಾಲ ಗುಜರಾತ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. ನ್ಯಾ.ಪರ್ದಿವಾಲಾ 2013,ಜ.28ರಂದು ಗುಜರಾತ್ ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.2021,ಜ.10ರಂದು ಗುವಾಹಟಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿರುವ ನ್ಯಾ.ಧುಲಿಯಾ 1960,ಆ.10ರಂದು ಜನಿಸಿದ್ದರು. 2008,ನ.1ರಂದು ಉತ್ತರಾಖಂಡ ಉಚ್ಚ ನ್ಯಾಯಾಲಯದ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News