ಇಸ್ರೇಲ್ ನಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮೂವರ ಹತ್ಯೆ, 4 ಮಂದಿಗೆ ಗಾಯ
ಟೆಲ್ಅವೀವ್, ಮೇ 6: ಇಸ್ರೇಲ್ನ ಟೆಲ್ಅವೀವ್ ನಗರದಲ್ಲಿ ಕೊಡಲಿ ಮತ್ತು ಚೂರಿಯಿಂದ ದಾಳಿ ನಡೆಸಿದ ತಂಡವೊಂದು ಮೂರು ಮಂದಿ ಇಸ್ರೇಲ್ ನಾಗರಿಕರನ್ನು ಹತ್ಯೆಗೈದು ಪರಾರಿಯಾಗಿದೆ ಎಂದು ವರದಿಯಾಗಿದೆ.
ದಾಳಿ ನಡೆಸಿದ ದುಷ್ಕರ್ಮಿಗಳು 19 ಮತ್ತು 20 ವರ್ಷದ ಯುವಕರಾಗಿದ್ದು ಇವರು ಆಕ್ರಮಿತ ಪಶ್ಚಿಮ ದಂಡೆಯ ಜೆನಿನ್ ನಗರದಲ್ಲಿ ಅವಿತುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದು, ಶಂಕಿತ ಹಂತಕರಿಗಾಗಿ ವ್ಯಾಪಕ ಶೋಧ ಕಾರ್ಯ ಮುಂದುವರಿದಿದೆ ಎಂದಿದ್ದಾರೆ.
ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳು, ಏಕಾಏಕಿ ರಸ್ತೆಗೆ ಹಾರಿ ಪಾದಚಾರಿಗಳ ಮೇಲೆ ಕೊಡಲಿ ಮತ್ತು ಚೂರಿಯಿಂದ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 3 ಮಂದಿ ಮೃತಪಟ್ಟು ಇತರ 4 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಫೋಟೊ ಮತ್ತು ಹೆಸರನ್ನು ಪ್ರಕಟಿಸಿದ ಪೊಲೀಸರು ಅವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ನಮ್ಮ ಕೈಗಳು ಭಯೋತ್ಪಾದಕರ ಮತ್ತು ಅವರಿಗೆ ನೆರವಾಗುವವರ ಮೂಲವನ್ನು ತಲುಪಲಿದೆ ಮತ್ತು ಅವರು ತಮ್ಮ ಕಾರ್ಯಕ್ಕೆ ಬೆಲೆ ತೆರಲಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಗುರುವಾರ ಹೇಳಿದ್ದಾರೆ.
ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸುವಂತೆ ಆದೇಶಿಸಿದರು ಎಂದು ವರದಿಯಾಗಿದೆ.
ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯಂದೇ ಈ ದಾಳಿ ಪ್ರಕರಣ ನಡೆದಿದೆ. ದಾಳಿಯನ್ನು ಖಂಡಿಸಿರುವ ಪೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್, ಪೆಲೆಸ್ತೀನೀಯರು ಮತ್ತು ಇಸ್ರೇಲ್ ಪ್ರಜೆಗಳ ಹತ್ಯೆಯಿಂದ ಏನನ್ನೂ ಸಾಧಿಸಲಾಗದು. ಇಂತಹ ಘಟನೆಗಳು ಉದ್ವಿಗ್ನತೆಗೆ ತುಪ್ಪ ಸುರಿಯಲಿದೆ ಮತ್ತು ಆಕ್ರಮಿತ ಪಶ್ಚಿಮ ದಂಡೆ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಸಾಧಿಸುವ ಕಾರ್ಯಕ್ಕೆ ಅಡ್ಡಿಯಾಗಲಿದೆ ಎಂದಿದ್ದಾರೆ.
1948ರಲ್ಲಿ ಇಸ್ರೇಲ್ ಸ್ವಾತಂತ್ರ್ಯ ಘೋಷಿಸಿಕೊಂಡ ದಿನದ ವರ್ಷಾಚರಣೆಯನ್ನು ಪೆಲೆಸ್ತೀನೀಯರು ನಕ್ಬಾ ಅಥವಾ ದುರಂತ ದಿನ ಎಂದು ಕರೆಯುತ್ತಾರೆ. ಇಸ್ರೇಲ್ ನಲ್ಲಿ ಗುರುವಾರ ನಡೆದ ದಾಳಿಯನ್ನು ಪೆಲೆಸ್ತೀನ್ ಸಂಘಟನೆ ಹಮಾಸ್ ಶ್ಲಾಘಿಸಿದೆ.