ವಿಶ್ವಸಂಸ್ಥೆ ನೇತೃತ್ವದ ಕಾರ್ಯಾಚರಣೆ: ಮರಿಯುಪೋಲ್‌ನಿಂದ 500 ನಾಗರಿಕರ ಸ್ಥಳಾಂತರ

Update: 2022-05-06 19:06 GMT

ಕೀವ್, ಮೇ 6: ರಶ್ಯ ಸೇನೆಯ ದಿಗ್ಬಂಧನಕ್ಕೆ ಒಳಗಾಗಿರುವ ಉಕ್ರೇನ್ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್ನ ಅಝೋವ್ಸ್ತಾಲ್ ಉಕ್ಕು ಸ್ಥಾವರದೊಳಗೆ ಆಶ್ರಯ ಪಡೆದಿರುವ ನಾಗರಿಕರನ್ನು ಸ್ಥಳಾಂತರಿಸುವ ವಿಶ್ವಸಂಸ್ಥೆ ನೇತೃತ್ವದ ಕಾರ್ಯಾಚರಣೆಯಲ್ಲಿ ಇದುವರೆಗೆ ಸುಮಾರು 500 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.

ಬಂದರು ನಗರದಲ್ಲಿ ಸಿಲುಕಿರುವ ಎಲ್ಲಾ ಯೋಧರು ಮತ್ತು ನಾಗರಿಕರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತೇವೆ. ಇದುವರೆಗೆ ಸುಮಾರು 500 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಾಗಿದೆ. ಇದೀಗ ಮತ್ತೊಂದು ಹಂತದ ಕಾರ್ಯಾಚರಣೆ ಆರಂಭವಾಗಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆ್ಯಂಡ್ರಿಯ್ ಯೆರ್ಮಾಕ್ ಹೇಳಿದ್ದಾರೆ. ಮುಂದಿನ ಹಂತದ ಕಾರ್ಯಾಚರಣೆಯಲ್ಲಿ ಉಕ್ಕುಸ್ಥಾವರದೊಳಗೆ ಸಿಲುಕಿರುವವರ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗುವುದು. ಕಾರ್ಯಾಚರಣೆ ಆರಂಭವಾಗಿದೆ ಮತ್ತು ಅದರ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಉಕ್ರೇನ್ ಉಪಪ್ರಧಾನಿ ಇರಿಬಾ ವೆರೆಸ್ಚುಕ್ ಹೇಳಿದ್ದಾರೆ.
 

ಹಲವು ದಿನಗಳ ಮುತ್ತಿಗೆಯ ಬಳಿಕ ಮರಿಯುಪೋಲ್ನ ಬಹುತೇಕ ಪ್ರದೇಶವನ್ನು ನಿಯಂತ್ರಣಕ್ಕೆ ಪಡೆದಿರುವುದಾಗಿ ರಶ್ಯ ಹೇಳಿದೆ. ಆದರೆ ಮರಿಯುಪೋಲ್ನ ಬೃಹತ್ ಅಝೋವ್ಸ್ತಲ್ ಉಕ್ಕು ಸ್ಥಾವರದಲ್ಲಿ ಆಶ್ರಯ ಪಡೆದಿರುವ ಯೋಧರು ರಶ್ಯ ಸೇನೆಗೆ ಪ್ರತಿರೋಧ ಒಡ್ಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭೂಗತ ಸುರಂಗಗಳಿರುವ ಸ್ಥಾವರದೊಳಗೆ ಹಲವು ನಾಗರಿಕರೂ ಆಶ್ರಯ ಪಡೆದಿರುವುದಾಗಿ ಉಕ್ರೇನ್ ಹೇಳಿದೆ. ಉಕ್ಕು ಸ್ಥಾವರದೊಳಗೆ ಸಿಲುಕಿರುವವರನ್ನು ಸ್ಥಳಾಂತರಿಸಲು ವಿಶ್ವಸಂಸ್ಥೆ ಮತ್ತು ರೆಡ್ಕ್ರಾಸ್ ನೇತೃತ್ವದ ಕಾರ್ಯಾಚರಣೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News