ವ್ಯಾಪಕ ಜನಾಕ್ರೋಶ ಹಿನ್ನೆಲೆ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ
ಕೊಲಂಬೊ: ಶ್ರೀಲಂಕಾದಲ್ಲಿ ಹದಗೆಡುತ್ತಿರುವ ಆರ್ಥಿಕ ಸಂಘರ್ಷದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದ ಬೆನ್ನಲ್ಲೇ ಅಧ್ಯಕ್ಷ ಗೊಟಬಯ ರಾಜಪಕ್ಸೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಅಧ್ಯಕ್ಷರ ಕ್ರಮಕ್ಕೆ ವಿರೋಧ ಪಕ್ಷದ ಮುಖಂಡ ಸಜಿತ್ ಪ್ರೇಮದಾಸ ಮತ್ತು ಕೆನಡಾ ರಾಯಭಾರಿ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿ ತಕ್ಷಣದಿಂದ ಜಾರಿಯಾಗಿದ್ದು, ಸಾರ್ವಜನಿಕ ಭದ್ರತೆ ಹಿತಾಸಕ್ತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ನೋಟಿಸ್ ನೀಡಿದೆ.
ಸಂಸತ್ ಭವನದ ಮುಂದೆ ನಡೆಯುತ್ತಿದ್ದ ಧರಣಿ ನಿರತರನ್ನು ಚದುರಿಸುವ ಸಲುವಾಗಿ ಪೊಲೀಸರು ಅಶ್ರುವಾಯು ಸಿಡಿಸಿದ್ದು, ಆಮದು ಆಹಾರ, ಇಂಧನ ಮತ್ತು ಔಷಧಿಗಳ ಕೊರತೆ ಹಿನ್ನೆಲೆಯಲ್ಲಿ ತಿಂಗಳ ಬಳಿಕ ಮತ್ತೆ ಹಿಂಸಾತ್ಮಕ ಪ್ರತಿಭಟನೆ ಆರಂಭವಾಗಿದೆ.
ಕೋವಿಡ್-19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೀಡಾದ ದೇಶದಲ್ಲಿ ತೈಲ ಬೆಲೆ ಏರುಮುಖವಾಗಿದ್ದು, ಸರ್ಕಾರ ತೆರಿಗೆ ಕಡಿತವನ್ನು ಘೋಷಿಸಿದ ಹಿನ್ನೆಲೆಯಲ್ಲಿ, ದೇಶದ ಬಳಕೆಯೋಗ್ಯ ವಿದೇಶಿ ವಿನಿಮಯ ದಾಸ್ತಾನು 50 ದಶಲಕ್ಷ ಡಾಲರ್ ಗೆ ಇಳಿದಿದೆ ಎಂದು ಹಣಕಾಸು ಸಚಿವರು ಕಳೆದ ವಾರ ಪ್ರಕಟಿಸಿದ್ದರು.
ಹೊಸದಾಗಿ ಹೇರಿರುವ ತುರ್ತು ಪರಿಸ್ಥಿತಿಯ ನಿಬಂಧನೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಹಿಂದಿನ ತುರ್ತು ಪರಿಸ್ಥಿತಿಯ ಕಾನೂನುಗಳ ಪ್ರಕಾರ, ಮಿಲಿಟರಿ ನಿಯೋಜನೆ, ಯಾವುದೇ ಆರೋಪವಿಲ್ಲದೇ ಜನರನ್ನು ಬಂಧಿಸುವುದು ಮತ್ತು ಪ್ರತಿಭಟನೆ ಹತ್ತಿಕ್ಕುವುದು ಸೇರಿದಂತೆ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿತ್ತು.
ಅಧ್ಯಕ್ಷರ ಆದೇಶವನ್ನು ಸಂಸತ್ 30 ದಿನಗಳ ಒಳಗಾಗಿ ಅನುಮೋದಿಸಬೇಕಿದೆ. ರಾಜಪಕ್ಸೆಯವರ ರಾಜೀನಾಮೆಗೆ ವ್ಯಾಪಕ ಆಗ್ರಹಗಳು ಕೇಳಿ ಬಂದಿದ್ದು, ತುರ್ತು ಪರಿಸ್ಥಿತಿ ಹೇರಿಕೆ ಪ್ರಸಕ್ತ ಸಮಸ್ಯೆಗೆ ಪರಿಹಾರವಲ್ಲ ಎಂದು ಪ್ರೇಮದಾಸ ಅಭಿಪ್ರಾಯಪಟ್ಟಿದ್ದಾರೆ.