ಚೆನ್ನೈ: ಯುವಕನ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಹಲವು ಪೊಲೀಸರ ಬಂಧನ ಸಾಧ್ಯತೆ

Update: 2022-05-07 07:37 GMT

ಚೆನ್ನೈ: ನಗರದಲ್ಲಿ 25 ವರ್ಷ ವಯಸ್ಸಿನ ಯುವಕನ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ವಿಘ್ನೇಶ್ ಎಂಬ ಯುವಕನ ಸಾವು ಈ ಹಿಂದೆ ಶಂಕಾಸ್ಪದ ಸಾವು ಎಂದು ದಾಖಲಾಗಿತ್ತಾದರೂ ಪೋಸ್ಟ್ ಮಾರ್ಟಂ ವರದಿಯಲ್ಲಿ ಆತನ ದೇಹದಲ್ಲಿ 13 ಕಡೆಗಳಲ್ಲಿ ಗಾಯಗಳಿವೆ ಎಂಬುದು ಉಲ್ಲೇಖಗೊಂಡಿರುವುದರಿಂದ ಇದನ್ನೊಂದು ಕೊಲೆ ಪ್ರಕರಣವೆಂದು ಮಾರ್ಪಡಿಸಲಾಗಿದೆ.

ವಿಘ್ನೇಶ್‍ನನ್ನು ಕಳೆದ ತಿಂಗಳು ಗಾಂಜಾ ಸಾಗಾಟ ಪ್ರಕರಣದಲ್ಲಿ ಹಾಗೂ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದಾದ ಮರುದಿನವೇ ಆತ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಇದರ ಬೆನ್ನಲ್ಲೇ ಒಬ್ಬ ಎಸ್ಸೈ, ಕಾನ್‍ಸ್ಟೇಬಲ್ ಮತ್ತು ಹೋಂಗಾರ್ಡ್ ಅನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಶುಕ್ರವಾರ ಹಲವಾರು ಪೊಲೀಸರನ್ನು ವಿಚಾರಣೆಗೆ ಕರೆಸಲಾಗಿತ್ತು.

ಪೊಲೀಸರ ಪ್ರಕಾರ ಕಸ್ಟಡಿಯಲ್ಲಿರುವ ವಿಘ್ನೇಶ್‍ಗೆ ಮೂರ್ಛೆ ರೋಗ ರೀತಿಯ ಲಕ್ಷಣಗಳು ಕಾಣಿಸಿಕೊಂಡಿದ್ದು ಆತನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಕಾಣಿಸಿಕೊಂಡ ಒಂದು ವೀಡಿಯೋದಲ್ಲಿ ವಿಘ್ನೇಶ್ ಓಡುವುದು ಹಾಗೂ ಪೊಲೀಸರು ಬೆಂಬತ್ತುತಿದ್ದಂತೆಯೇ ಆಯತಪ್ಪಿ ಬೀಳುವುದು ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಆತನಿಗೆ ಕೋಲಿನಿಂದ ಬಾರಿಸುತ್ತಿರುವುದು ಕಾಣಿಸುತ್ತದೆ. ಆತ ತಪ್ಪಿಸಿಕೊಳ್ಳಲೆತ್ನಿಸುವಾಗ ಪೊಲೀಸರತ್ತ ಚೂರಿ ಎಸೆದಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News