ಕಲ್ಲಿದ್ದಲು ಹಗರಣ; ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಪತ್ನಿ ವಿರುದ್ಧ ದಿಲ್ಲಿ ಕೋರ್ಟ್ ವಾರಂಟ್

Update: 2022-05-07 15:50 GMT
PTI

ಹೊಸದಿಲ್ಲಿ,ಮೇ 7: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಯವರ ಪತ್ನಿ ರುಜಿರಾ ಬ್ಯಾನರ್ಜಿ ಅವರ ವಿರುದ್ಧ ಶನಿವಾರ ಇಲ್ಲಿಯ ನ್ಯಾಯಾಲಯವೊಂದು ಜಾಮೀನು ನೀಡಬಹುದಾದ ವಾರಂಟ್ ಅನ್ನು ಹೊರಡಿಸಿದೆ. ಹಲವಾರು ಬಾರಿ ಸಮನ್ಸ್ ನೀಡಿದ್ದರೂ ರುಜಿರಾ ತನ್ನೆದುರು ಹಾಜರಾಗಲು ವಿಫಲರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ)ವು ದೂರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಕ್ರಮವನ್ನು ಕೈಗೊಂಡಿದೆ.

ಪಶ್ಚಿಮ ಬಂಗಾಳದ ಕುನುಸ್ತೋರಿಯಾ ಮತ್ತು ಕಜೋರಾ ಪ್ರದೇಶಗಳಲ್ಲಿನ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿ.ಗೆ ಸೇರಿದ ಗಣಿಗಳಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಕಳ್ಳತನದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಅಭಿಷೇಕ ಮತ್ತು ರುಜಿರಾ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.


ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯನಾಗಿರುವ ಅಭಿಷೇಕ್ ಮಾ.21ರಂದು ಇಡಿ‌ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳೊಂದಿಗೆ ಅವರನ್ನು ಎಂಟು ಗಂಟೆಗಳ ಕಾಲ ಪ್ರಶ್ನಿಸಲಾಗಿತ್ತು.

ಮಾ.22ರಂದು ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಇಡಿ ರುಜಿರಾಗೆ ಸೂಚಿಸಿತ್ತು. ಕೋವಿಡ್ ಸಾಂಕ್ರಾಮಿಕದ ಸೋಂಕಿಗೆ ತುತ್ತಾಗುವ ಅಪಾಯವನ್ನು ಉಲ್ಲೇಖಸಿ ಅವರು ವಿಚಾರಣೆಗೆ ಗೈರಾಗಿದ್ದರು.

ಅಭಿಷೇಕ್ ಮತ್ತು ರುಜಿರಾ ಸಮನ್ಸ್ ಪ್ರಶ್ನಿಸಿ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರಾದರೂ ಅದು ಮಾ.11ರಂದು ಅವರ ಅರ್ಜಿಯನ್ನು ವಜಾಗೊಳಿಸಿತ್ತು. ವಿಷಯವೀಗ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News