ಮಹಾರಾಷ್ಟ್ರ: ಮಕ್ಕಳು ಸಹಿತ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಸಾವು

Update: 2022-05-08 07:17 GMT
ಸಾಂದರ್ಭಿಕ ಚಿತ್ರ (PTI)

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶನಿವಾರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಕ್ವಾರಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗಿದ್ದ ಮಕ್ಕಳಲ್ಲಿ ಕಾಲು ಜಾರಿ ನೀರಿಗೆ  ಬಿದ್ದ ಒಂದು ಮಗುವನ್ನು ರಕ್ಷಿಸಲು ಕುಟುಂಬ ಸದಸ್ಯರು ಕ್ವಾರಿಗೆ ಹಾರಿರಬಹುದು ಎಂದು ಮೇಲ್ನೋಟಕ್ಕೆ ಕಾಣುತ್ತೆ ಅವರು ಹೇಳಿದ್ದಾರೆ.

ಮುಂಬೈಗೆ ಹೊಂದಿಕೊಂಡಿರುವ ಡೊಂಬಿವಲಿ ಬಳಿಯ ಸಂದಪ್ ಗ್ರಾಮದಲ್ಲಿ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಗ್ರಾಮಸ್ಥರು ಹೇಳುವ ಪ್ರಕಾರ, ಗ್ರಾಮದಲ್ಲಿ ನೀರಿನ ಅಭಾವದಿಂದ ಕುಟುಂಬ ಸದಸ್ಯರು ಬಟ್ಟೆ ಒಗೆಯಲು ಕ್ವಾರಿಗೆ ತೆರಳಿದ್ದರು. ಮಹಿಳೆಯರು ಬಟ್ಟೆ ಒಗೆಯುತ್ತಿದ್ದಾಗ ಅವರೊಂದಿಗಿದ್ದ ಮಗು ಕ್ವಾರಿಗೆ ಬಿದ್ದಿದ್ದು, ಬಳಿಕ ಆತನನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಆದರೆ ಐವರೂ ನೀರಿನಲ್ಲಿ ಮುಳುಗಿದರು.

ಮೃತರನ್ನು ಮೀರಾ ಗಾಯಕ್ವಾಡ್ (55), ಅವರ ಸೊಸೆ ಅಪೇಕ್ಷಾ (30) ಮತ್ತು ಮೊಮ್ಮಕ್ಕಳಾದ ಮಯೂರೇಶ್ (15), ಮೋಕ್ಷ (13) ಮತ್ತು ನೀಲೇಶ್ (15) ಎಂದು ಗುರುತಿಸಲಾಗಿದೆ.

"ಒಬ್ಬ ಮಹಿಳೆ ಮತ್ತು ಆಕೆಯ ಸೊಸೆ ಕ್ವಾರಿ ಬಳಿ ಬಟ್ಟೆ ಒಗೆಯುತ್ತಿದ್ದಾಗ ಹತ್ತಿರ ಕುಳಿತಿದ್ದ ಮಹಿಳೆಯ ಮೂವರು ಮೊಮ್ಮಕ್ಕಳಲ್ಲಿ ಒಬ್ಬರು ನೀರಿಗೆ ಜಾರಿದರು ಎಂದು ತೋರುತ್ತದೆ. ಉಳಿದ ನಾಲ್ವರು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು ಆದರೆ ಅವರೆಲ್ಲರೂ ನೀರಿನಲ್ಲಿ ಮುಳುಗಿದರು." ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಡೊಂಬಿವಲಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News