×
Ad

ಹೊನ್ನಾವರ: ಅರಣ್ಯ ಹಕ್ಕಿಗಾಗಿ ಅರಣ್ಯವಾಸಿಗಳಿಂದ ಬೃಹತ್ ಸಮಾವೇಶ

Update: 2022-05-08 15:51 IST

ಭಟ್ಕಳ, ಮೇ 8: ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು ನಡೆಸುತ್ತಿರುವ ಹಕ್ಕಿಗಾಗಿನ ಹೋರಾಟ ತೀವ್ರಗೊಂಡಿದ್ದು, ಅರಣ್ಯಹಕ್ಕು ಹೋರಾಟಗಾರ ನ್ಯಾಯವಾದಿ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶನಿವಾರ ಬೃಹತ್‌ ಜಾಗೃತಿ ಸಮಾವೇಶ ನಡೆದಿದ್ದು ಜಿಲ್ಲೆಯ ಸಹಸ್ರಾರು ಸಂಖ್ಯೆಯ ಅರಣ್ಯವಾಸಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

ಬಹುಪಾಲು ಅರಣ್ಯ ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು ಹಲವಾರು ವರ್ಷಗಳಿಂದ ಅರಣ್ಯ ಇಲಾಖೆಯ ದಬ್ಬಾಳಿಕೆಯನ್ನು ಸಹಿಸುತ್ತ ಬಂದಿದ್ದಾರೆ. ಅರಣ್ಯವಾಸಿಗಳ ಹಕ್ಕಿನ ಕುರಿತಂತೆ ಕಳೆದ ಮೂವತ್ತು ವರ್ಷಗಳಿಂದಲೂ ಹೋರಾಟ ಮಾಡುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಳೆದ ಒಂದು ತಿಂಗಳಿನಿಂದ ಅರಣ್ಯವಾಸಿಗಳಲ್ಲಿ ಜಾಗೃತಿಯನ್ನುಂಟು ಮಾಡಲು ಹಳ್ಳಿಹಳ್ಳಿಗೂ ಹೋರಾಟ ವಾಹಿನಿ ಜಾಥಾವನ್ನು ಹಮ್ಮಿಕೊಂಡಿದ್ದು ಐದು ಸಾವಿರ ಕಿ.ಮೀ. ಸಂಚರಿಸಿ ಉ.ಕ. ಜಿಲ್ಲೆಯ 370 ಹಳ್ಳಿಗಳ ಅರಣ್ಯವಾಸಿಗಳಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಹೋರಾಟ ವಾಹಿನಿ ಯು ಯಶಸ್ವಿಯಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.

69,733 ಅರ್ಜಿ ತಿರಸ್ಕೃತ: ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿಗ್ರಾಮೀಣ ಭಾಗದ ಅತಿಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಸಲ್ಲಿಸಿರುವ ಒಟ್ಟೂ ಅರ್ಜಿ 89,167. ಈ ಪೈಕಿ ಶೇ 78.20 ಅಂದರೆ 69,733 ಅರ್ಜಿಗಳು ತಿರಸ್ಕೃತಗೊಂಡಿವೆ. ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು 1331 ಪಾರಂಪರಿಕ ಅರಣ್ಯವಾಸಿಗಳಿಗೆ 398 ಹಾಗೂ ಸಮುದಾಯ ಉದ್ದೇಶಕ್ಕೆ 1126 ಒಟ್ಟೂ 2852 ಹೀಗೆ ಶೇಕಡವಾರು ಬಂದಿರುವಂಥ ಗ್ರಾಮೀಣ ಭಾಗದ ಅರ್ಜಿಯಲ್ಲಿ ಶೇ 3.2ರಷ್ಟು ಮಾತ್ರ ಹಕ್ಕು ಪ್ರಾಪ್ತವಾಗಿದೆ ಎಂದುರವೀಂದ್ರ ನಾಯ್ಕ ತಿಳಿಸಿದರು.

 ಪ್ರತಿಭಟನೆಯ  ಈ ಸಂದರ್ಭದಲ್ಲಿ ಪರಿಸರ ರಕ್ಷಣೆ, ಪೋಷಣೆ, ಸಂರಕ್ಷಣೆ ಶ್ರೇಯಸ್ಸಿಗೆ ಕಾರಣರಾದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡರನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News