×
Ad

ಹಿ.ಪ್ರದೇಶ ವಿಧಾನಸಭೆಯ ಮುಖ್ಯದ್ವಾರದಲ್ಲಿ ಖಾಲಿಸ್ತಾನಿ ಧ್ವಜಗಳು ಪತ್ತೆ:‌ ತನಿಖೆಗೆ ಆದೇಶ

Update: 2022-05-08 20:12 IST
PHOTO :TWITTER/@ani_digital

ಧರ್ಮಶಾಲಾ.ಎ.8: ಹಿಮಾಚಲ ಪ್ರದೇಶದ ಚಳಿಗಾಲದ ರಾಜಧಾನಿ ಧರ್ಮಶಾಲಾದಲ್ಲಿರುವ ವಿಧಾನಸಭಾ ಕಟ್ಟಡದ ಮುಖ್ಯದ್ವಾರದಲ್ಲಿ ಮತ್ತು ಆವರಣ ಗೋಡೆಯಲ್ಲಿ ಖಾಲಿಸ್ತಾನಿ ಧ್ವಜಗಳನ್ನು ಕಟ್ಟಲಾಗಿದ್ದು ರವಿವಾರ ಬೆಳಿಗ್ಗೆ ಕಂಡುಬಂದಿದೆ ಎಂದು ಮುಖ್ಯಮಂತ್ರಿ ಜೈರಾಮ ಠಾಕೂರ್ ತಿಳಿಸಿದ್ದಾರೆ.

‘ಧರ್ಮಶಾಲಾ ವಿಧಾನಸಭಾ ಸಂಕೀರ್ಣದ ಮುಖ್ಯದ್ವಾರದಲ್ಲಿ ಖಾಲಿಸ್ತಾನಿ ಧ್ವಜಗಳನ್ನು ಪ್ರದರ್ಶಿಸಿರುವ ಹೇಡಿತನದ ಕೃತ್ಯವನ್ನು ನಾನು ಖಂಡಿಸುತ್ತೇನೆ ’ ಎಂದು ಟ್ವೀಟಿಸಿರುವ ಠಾಕೂರ್,ಈ ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನ ಮಾತ್ರ ನಡೆಯುವುದರಿಂದ ಆ ಸಮಯದಲ್ಲಿ ಇಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳು ಅಗತ್ಯವಾಗಿರುತ್ತವೆ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ತ್ವರಿತ ತನಿಖೆಯನ್ನು ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿರುವ ಠಾಕೂರ್,ನಿಮಗೆ ಧೈರ್ಯವಿದ್ದರೆ ಹಗಲಿನಲ್ಲಿ ಬನ್ನಿ,ರಾತ್ರಿಯಲ್ಲಿ ಅಲ್ಲ ಎಂದು ದುಷ್ಕರ್ಮಿಗಳಿಗೆ ಹೇಳಲು ತಾನು ಬಯಸಿದ್ದೇನೆ ಎಂದಿದ್ದಾರೆ.

ಹಿ.ಪ್ರದೇಶವು ಸೌಹಾರ್ದಯುತ ರಾಜ್ಯವಾಗಿದ್ದು,ಇಲ್ಲಿ ಶಾಂತಿಯು ಸದಾ ನೆಲೆಸಿರಬೇಕು ಎಂದಿದ್ದಾರೆ.ವಿಧಾನಸಭಾ ಸಂಕೀರ್ಣದಲ್ಲಿದ್ದ ಖಾಲಿಸ್ತಾನಿ ಧ್ವಜಗಳನ್ನು ತೆಗೆಯಲಾಗಿದೆ ಎಂದು ತಿಳಿಸಿದ ಕಾಂಗಡಾ ಎಸ್ಪಿ ಕುಶಲಚಂದ ಶರ್ಮಾ ಅವರು, ಇದು ಪಂಜಾಬಿನಿಂದ ಬಂದಿದ್ದ ಪ್ರವಾಸಿಗಳ ಕೃತ್ಯವಾಗಿರಬಹುದು ಎಂದರು.

ಈ ವಿಷಯದ ಬಗ್ಗೆ ವಿಚಾರಣೆ ನಡೆಯುತ್ತಿದ್ದು,ಪ್ರಕರಣವನ್ನು ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದ ಉಪವಿಭಾಗಾಧಿಕಾರಿ ಶಿಲ್ಪಿ ಬೇಕ್ತಾ ಅವರು,‘ಇದು ಹೆಚ್ಚು ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವಂತೆ ನಮಗೆ ಎಚ್ಚರಿಕೆಯ ಗಂಟೆಯಾಗಿದೆ ’ಎಂದರು.ಶಿಮ್ಲಾದಲ್ಲಿ ಖಾಲಿಸ್ತಾನಿ ಧ್ವಜವನ್ನು ಹಾರಿಸುವಂತೆ ಸಿಖ್ಸ್ ಫಾರ್ ಜಸ್ಟೀಸ್‌ನ ನಾಯಕ ಗುರ್ಪತ್ವಂತ್ ಸಿಂಗ್ ಕಳೆದ ತಿಂಗಳು ಕರೆ ನೀಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News