×
Ad

​ಹಿರಿಯಡ್ಕ: ನಾಪತ್ತೆಯಾದ 9 ತಿಂಗಳ ಬಳಿಕ ಯುವಕನ ಮೃತದೇಹ ಪತ್ತೆ

Update: 2022-05-08 21:37 IST
ನಾಗರಾಜ್ 

ಹಿರಿಯಡ್ಕ, ಮೇ 8: ಒಂಭತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವ ಮೃತದೇಹವು ಅಸ್ಥಿಪಂಜರದ ಸ್ಥಿತಿಯಲ್ಲಿ ಮೇ 7ರಂದು ಸಂಜೆ 5.30ರ ಸುಮಾರಿಗೆ ಚೌಂಡಿ ನಗರದ ಕೇಶವ ಹೆಗ್ಡೆಯವರ ಹಾಡಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಪೆರ್ಡೂರು ಪಕ್ಕಾಲು ನಿವಾಸಿ ಮಂಜುನಾಥ ಆಚಾರಿ ಎಂಬವರ ಮಗ ನಾಗರಾಜ್ (30) ಎಂದು ಗುರುತಿಸಲಾಗಿದೆ. ಇವರು 2021ರ ಆಗಸ್ಟ್ ತಿಂಗಳಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ಅವರನ್ನು ಎಲ್ಲಾ ಕಡೆ ಹುಡುಕಾಡಿ ದರೂ ಪತ್ತೆಯಾಗಿರಲಿಲ್ಲ.

ಮೇ 7ರಂದು ಸಂಜೆ ಹಾಡಿಯಲ್ಲಿ ತಲೆ ಬುರುಡೆ ಮತ್ತು ಎಲುಬುಗಳು ಹಾಗೂ ಕಪ್ಪುಬಣ್ಣದ ಪ್ಯಾಂಟ್ ಮತ್ತು 2 ಖಾಲಿ ಪ್ಲಾಸ್ಟಿಕ್ ಬಾಟಲುಗಳು ಪತ್ತೆಯಾಗಿದ್ದವು. ಈ ಕುರಿತು ನಾಗರಾಜ್ ಆಚಾರ್ಯರ ಮನೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬಟ್ಟೆ ಹಾಗೂ ಚಪ್ಪಲಿ ಮೂಲಕ ಇವು ನಾಗರಾಜ್ ಆರ್ಚಾಯರ ಮೃತದೇಹ ಎಂಬುದನ್ನು ದೃಢಪಡಿಸಿದರು.

ಇವರು ತಾನು ತೆಗೆದುಕೊಂಡು ಹೋದ ಹಗ್ಗದಿಂದ ನೇಣು ಬಿಗಿದುಕೊಂಡು ಅಥವಾ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಕಾಡು ಪ್ರಾಣಿಗಳು ಅಥವಾ ಇತರ ಜಂತುಗಳು ತಿಂದಿರುವುದರಿಂದ ಅಸ್ಥಿ ಪಂಜರ ಮಾತ್ರ ಉಳಿದುಕೊಂಡಿದೆ.

ನಾಗರಾಜ್ ಆಚಾರ್ಯ ಸಾಲದ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಇತರ ಕಾರಣದಿಂದ ಮೃತಪಟ್ಟಿರಬಹುದೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News