×
Ad

ಕೋವಿಡ್‌ನಿಂದ ಮೃತಪಟ್ಟವರ ಪ್ರಮಾಣ: ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿರಸ್ಕರಿಸಿದ ಪಾಕಿಸ್ತಾನ

Update: 2022-05-08 22:36 IST
abdul qadir patel

ಇಸ್ಲಮಾಬಾದ್, ಮೇ 8: ಪಾಕಿಸ್ತಾನದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ತಿರಸ್ಕರಿಸಿರುವ ಪಾಕಿಸ್ತಾನ, ದತ್ತಾಂಶ ಸಂಗ್ರಹಿಸಲು ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ಕ್ರಮವನ್ನು ಪ್ರಶ್ನಿಸಿದ್ದು ಸಂಖ್ಯೆಗಳನ್ನು ಕ್ರೋಢೀಕರಿಸುವ ಸಾಫ್ಟ್‌ವೇರ್‌ನಲ್ಲಿ  ದೋಷವಿರಬಹುದು ಎಂದಿದೆ.
 

ಕೋವಿಡ್ ಸೋಂಕಿನಿಂದ ಪಾಕಿಸ್ತಾನದಲ್ಲಿ 2,60,000 ಸಾವು ಸಂಭವಿಸಿದೆ. ಇದು ಸರಕಾರದ ಅಂಕಿಅಂಶಕ್ಕಿಂತ 8 ಪಟ್ಟು ಹೆಚ್ಚು ಎಂದು ಇತ್ತೀಚೆಗೆ ಪ್ರಕಟವಾದ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವದಾದ್ಯಂತ ಸುಮಾರು 15 ಮಿಲಿಯನ್ ಜನತೆ ಕೋವಿಡ್‌ನಿಂದ  ಅಥವಾ ಅದರ ಪರಿಣಾಮದಿಂದ ಸಾವನ್ನಪ್ಪಿದ್ದಾರೆ. ಇದು ಸರಕಾರಗಳು ಪ್ರಕಟಿಸಿದ ಅಂಕಿಅಂಶಕ್ಕಿಂತ ಹಲವು ಪಟ್ಟು ಅಧಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೋವಿಡ್ ಸೋಂಕಿನಿಂದ ದೇಶದಲ್ಲಿ 30,369 ಸಾವು ಸಂಭವಿಸಿದೆ ಎಂದು ಪಾಕ್ ಸರಕಾರ ಹೇಳಿತ್ತು.

ಕೋವಿಡ್ ಮರಣದ ಅಂಕಿಅಂಶವನ್ನು ನಾವು ಕೈಯಾರೆ ಸಂಗ್ರಹಿಸುತ್ತೇವೆ. ಇದರಲ್ಲಿ ಕೆಲವು ನೂರರಷ್ಟು ವ್ಯತ್ಯಾಸವಿರಬಹುದು. ಆದರೆ ಸಾವಿರ, ಲಕ್ಷದಷ್ಟು ವ್ಯತ್ಯಾಸ ಇರಲು ಸಾಧ್ಯವಿಲ್ಲ. ಇದು ಸಂಪೂರ್ಣ ಆಧಾರರಹಿತ ವರದಿ ಎಂದು ಪಾಕಿಸ್ತಾನದ ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ರನ್ನು ಉಲ್ಲೇಖಿಸಿ ಸಮಾ ನ್ಯೂಸ್ ವರದಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ತಿರಸ್ಕರಿಸಿರುವ ಜೊತೆಗೆ, ತಾನು ಅನುಸರಿಸಿದ ಲೆಕ್ಕಾಚಾರ ಕ್ರಮದ ಬಗ್ಗೆ ವಿವರಿಸಿ ವಿಶ್ವಸಂಸ್ಥೆಗೆ ಪತ್ರ ರವಾನಿಸಲಾಗಿದೆ. ಪಾಕಿಸ್ತಾನದ ಅಧಿಕಾರಿಗಳು ಆಸ್ಪತ್ರೆಯಿಂದ, ಕೇಂದ್ರ ಸಮಿತಿಯಿಂದ ಮತ್ತು ಸ್ಮಶಾನದ ಸಿಬಂದಿಯಿಂದ ಮಾಹಿತಿ ಕಲೆಹಾಕಿ ಅಂಕಿಅಂಶ ತಯಾರಿಸಲಾಗಿದೆ ಎಂದಿರುವ ಸಚಿವರು, ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶ ಸಂಗ್ರಹಿಸುವ ಸಾಫ್ಟ್‌ವೇರ್‌(ತಂತ್ರಾಂಶ)ದಲ್ಲಿ ದೋಷ ಇರಬಹುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News