ಖರ್ಗೋನ್‌ ಹಿಂಸಾಚಾರ: ಮೂವರು ಪ್ರಮುಖ ಆರೋಪಿಗಳ ಸೆರೆ, ಪೊಲೀಸ್‌ ಹೇಳಿಕೆ

Update: 2022-05-09 10:28 GMT

ಹೊಸದಿಲ್ಲಿ: ಎಪ್ರಿಲ್‌ನಲ್ಲಿ ನಡೆದ ಖಾರ್ಗೋನ್ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.

ರವಿವಾರ, ವಿಶೇಷ ಸಶಸ್ತ್ರ ಪಡೆ ಕಮಾಂಡೆಂಟ್ ಅಂಕಿತ್ ಜೈಸ್ವಾಲ್ ಅವರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ 72 ಪ್ರಕರಣಗಳಲ್ಲಿ ಒಟ್ಟು 182 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಇತರ ಆರೋಪಿಗಳ ಪತ್ತೆಗೆ ಇನ್ನೂ ಶೋಧ ನಡೆಯುತ್ತಿದೆ ಎಂದು ಖಾರ್ಗೋನ್‌ನಲ್ಲಿ ನಿಯೋಜನೆಗೊಂಡಿರುವ ಜೈಸ್ವಾಲ್ ಹೇಳಿದ್ದಾರೆ.

ಏಪ್ರಿಲ್ 10 ರಂದು, ಖಾರ್ಗೋನ್‌ನ ತಾಲಾಬ್ ಚೌಕ್ ಪ್ರದೇಶದಲ್ಲಿ ಜೋರಾಗಿ ಮತ್ತು ಪ್ರಚೋದನಕಾರಿ ಸಂಗೀತವನ್ನು ನುಡಿಸುವುದನ್ನು ವಿರೋಧಿಸಿ ಕೆಲವರು ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಿದ್ದರು ಎಂದು ಆರೋಪಿಸಲಾಗಿತ್ತು. ತರುವಾಯ, ಗೌಶಾಲಾ ಮಾರ್ಗ, ತಬಾಡಿ ಚೌಕ್, ಸಂಜಯ್ ನಗರ ಮತ್ತು ಮೋತಿಪುರ ಪ್ರದೇಶಗಳಲ್ಲಿ ಘರ್ಷಣೆಗಳು ಪ್ರಾರಂಭವಾದವು. ಹಿಂಸಾಚಾರದಲ್ಲಿ ಕನಿಷ್ಠ 24 ಜನರು ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಹತ್ತು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ.

ಕೋಮು ಘರ್ಷಣೆಯ ಸಂದರ್ಭದಲ್ಲಿ ನಾಪತ್ತೆಯಾಗಿದ್ದ 28 ವರ್ಷದ ಯುವಕನನ್ನು ಜಿಲ್ಲಾಡಳಿತವು ಏಪ್ರಿಲ್ 18 ರಂದು ಹಿಂಸಾಚಾರದ ಮೊದಲ ಬಲಿಪಶು ಎಂದು ಘೋಷಿಸಿತು. ಆನಂದ್ ನಗರ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಇಕ್ಬಾಲ್ ಬಾನಿಯನ್ನು ರತ್ಲಂ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಜೈಸ್ವಾಲ್ ಭಾನುವಾರ ಹೇಳಿದ್ದಾರೆ. ಭಟ್ವಾಡಿ ಪ್ರದೇಶದಲ್ಲಿ ನಡೆದ ಗಲಭೆಗೆ ಕಾರಣಕರ್ತನಾದ ಎರಡನೇ ಆರೋಪಿ ಅಫ್ಜಲ್‌ನನ್ನು ಇಂದೋರ್‌ನಲ್ಲಿ ಬಂಧಿಸಲಾಗಿದೆ.

ಪ್ರಕರಣದ ಮೂರನೇ ಪ್ರಮುಖ ಆರೋಪಿ ಅರ್ಶ್‌ನನ್ನು ಖಾರ್ಗೋನೆಯ ಕಾಸರವಾಡ ಪಟ್ಟಣದಲ್ಲಿ ಬಂಧಿಸಲಾಗಿದೆ. ಹಿಂಸಾಚಾರದ ನಂತರ, ಕಳೆದ ತಿಂಗಳು ನಗರದಲ್ಲಿ ಕರ್ಫ್ಯೂ ವಿಧಿಸಲಾಯಿತು. 24 ದಿನಗಳ ನಂತರ ಮೇ 24 ರಂದು ಅದನ್ನು ತೆಗೆದುಹಾಕಲಾಯಿತು.

ಏಪ್ರಿಲ್ 11 ರಂದು ಮಧ್ಯಪ್ರದೇಶ ಸರ್ಕಾರವು ಖಾರ್ಗೋನ್‌ನಲ್ಲಿ ಮುಸ್ಲಿಮರ ಮನೆಗಳು ಮತ್ತು ಅಂಗಡಿಗಳನ್ನು ನೆಲಸಮಗೊಳಿಸಿತು. ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ ಖಾರ್ಗೋನ್ ರೇಂಜ್, ತಿಲಕ್ ಸಿಂಗ್, ಕೆಡವಲಾದ ಮನೆಗಳು ಮೆರವಣಿಗೆಯ ಸಮಯದಲ್ಲಿ ಕಲ್ಲು ಎಸೆದವರಿಗೆ ಸೇರಿದ್ದು ಎಂದು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News