ಗೋರಕ್ಷಕರ ವಿರುದ್ಧದ ಎಫ್‍ಐಆರ್ ವಾಪಸ್ ಪಡೆಯಿರಿ, ಶಸ್ತ್ರಾಸ್ತ್ರ ಅನುಮತಿ ನೀಡಿ : ಗೋರಕ್ಷಕರ ಮಹಾಪಂಚಾಯತ್ ಆಗ್ರಹ

Update: 2022-05-09 11:50 GMT

 ಹೊಸದಿಲ್ಲಿ: ಗೋರಕ್ಷಕರ ವಿರುದ್ಧ ದಾಖಲಿಸಲಾಗಿರುವ ಎಫ್‍ಐಆರ್ ಗಳನ್ನು ವಾಪಸ್ ಪಡೆಯಬೇಕು ಮತ್ತು ಅವರಿಗೆ ಶಸ್ತ್ರಾಸ್ತ್ರ ಪರವಾನಗಿಯನ್ನು ಒದಗಿಸಬೇಕೆಂದು ಹರ್ಯಾಣಾದ ನುಹ್ ಜಿಲ್ಲೆಯ ಗೋಶಾಲೆಯಲ್ಲಿ ರವಿವಾರ  ಗೋರಕ್ಷಕ ಸಂಘಟನೆಗಳ ಮಹಾಪಂಚಾಯತ್ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಒಂದು ತಿಂಗಳೊಳಗೆ ಗೋಕಳ್ಳಸಾಗಣಿಕೆಯನ್ನು ನಿಲ್ಲಿಸಬೇಕು ಎಂಬ ಗಡುವನ್ನೂ ಸಭೆಯಲ್ಲಿ ವಿಧಿಸಲಾಗಿದೆ.

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ  ಗೋರಕ್ಷಕರನ್ನು ಜಿಲ್ಲೆಯ ಗ್ರಾಮಗಳಿಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಫಿರೋಝ್‍ಪುರ್ ಝಿರ್ಕಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರು ಎಚ್ಚರಿಕೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ಗೋಕಳ್ಳಸಾಗಣಿಕೆ ಹಾಗೂ ಹತ್ಯೆ ಆರೋಪ ಹೊರಿಸಿ ಗೋರಕ್ಷಕರು ಹಲವು ಮುಸ್ಲಿಂ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಅಪಹರಿಸಿದ ಘಟನೆಗಳು ನುಹ್‍ನಲ್ಲಿ ನಡೆದ ನಂತರ ಖಾನ್ ಹೇಳಿಕೆ ನೀಡಿದ್ದರು.

ಎಪ್ರಿಲ್ 23ರಂದು ನಡೆದ ಇಂತಹ ಒಂದು ಘಟನೆಯಲ್ಲಿ ಶೇಖ್‍ಪುರ್ ಗ್ರಾಮದ ಸಾಹಿಬ್ ಹುಸೇನ್ ಎಂಬಾತನ್ನು ಸುಮಾರು 20-25 ಮಂದಿಯ ಶಸ್ತ್ರಸಜ್ಜಿತ ತಂಡ ಅಪಹರಿಸಿತ್ತು. ಹುಸೈನ್ ವಿರುದ್ಧ ನಂತರ ಹರ್ಯಾಣ ಗೋವಂಶ್ ಸಂರಕ್ಷಣ್ ಮತ್ತು ಗೋಸಂವರ್ಧನ್ ಕಾಯಿದೆ 2015 ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಮೂರರಿಂದ ನಾಲ್ಕು ಮಂದಿ ಅಪರಿಚಿತ ಮಂದಿಯ ವಿರುದ್ಧ ಪ್ರಕರಣ ದಾಲಿಸಲಾಗಿತ್ತು. ಆರೋಪಿಗಳು ಬಜರಂಗದಳ ಕಾರ್ಯಕರ್ತರೆಂದು ಸ್ಥಳೀಯರು ಗುರುತಿಸಿದ್ದರು.

ಇಂತಹುದೇ ಘಟನೆಗಳು ಹತ್ತಿರದ ಬಸಾಯಿ ಮಿಯೋ ಮತ್ತು ರಾವ್ಲಿ ಗ್ರಾಮಗಳಿಂದಲೂ ವರದಿಯಾಗಿತ್ತು.

ರವಿವಾರದ ಮಹಾಪಂಚಾಯತ್‍ಗೆ ಆಡಳಿತ ಅನುಮತಿಸಿತ್ತು, ಆದರೆ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು ಎಂಬ ಎಚ್ಚರಿಕೆ ನೀಡಲಾಗಿತ್ತು ಎಂದು ನುಹ್ ಜಿಲ್ಲಾಧಿಕಾರಿ ಹೇಳಿದ್ದಾರೆ.

ಆದರೆ ಸಭೆಯಲ್ಲಿ ಭಾಗವಹಿಸಿದ್ದ ಕನಿಷ್ಠ ನಾಲ್ಕು ಮಂದಿ ಬಂದೂಕುಗಳನ್ನು ಹೊಂದಿದ್ದರೆ ಹಲವರು ಖಡ್ಗ ಮತ್ತು ಕೊಡಲಿಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.

ಬಿಜೆಪಿಯ ಸೋಹ್ನಾ ಶಾಸಕ ಸಂಜಯ್ ಸಿಂಗ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರಲ್ಲದೆ ಮಹಾಪಂಚಾಯತ್ ಬೇಡಿಕೆಗಳನ್ನು ರಾಜ್ಯ ಮುಖ್ಯಮಂತ್ರಿ ಮುಂದಿಡುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News