×
Ad

ಶರಣಾಗತಿಯ ಪ್ರಶ್ನೆಯೇ ಇಲ್ಲ: ಉಕ್ರೇನ್ ಸೇನೆ ಘೋಷಣೆ

Update: 2022-05-09 23:56 IST
PHOTO:TWITTER

ಕೀವ್, ಮೇ 9: ಉಕ್ರೇನ್‌ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್‌ನ ಉಕ್ಕುಸ್ಥಾವರದೊಳಗೆ ಆಶ್ರಯ ಪಡೆದು ರಶ್ಯನ್ ಸೇನೆಗೆ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್‌ನ ಯೋಧರು, ತಾವು ಶರಣಾಗುವ ಮಾತೇ ಇಲ್ಲ. ಯುದ್ಧ ಮುಂದುವರಿಸುವುದು ತಮಗಿರುವ ಆಯ್ಕೆಯಾಗಿದೆ ಎಂದು ರವಿವಾರ ಹೇಳಿದ್ದಾರೆ.

 ಮರಿಯುಪೋಲ್‌ನ ರಕ್ಷಣೆಗೆ ನಿಯೋಜಿತವಾಗಿರುವ ನಾವೆಲ್ಲಾ ರಶ್ಯದ ಯೋಧರ ಮೂಲಕ ರಶ್ಯ ಎಸಗಿರುವ ಯುದ್ಧಾಪರಾಧಕ್ಕೆ ಸಾಕ್ಷಿಗಳಾಗಿದ್ದೇವೆ. ನಾವು ಶರಣಾಗುವ ಆಯ್ಕೆಯನ್ನು ಬಯಸುವುದಿಲ್ಲ, ಯಾಕೆಂದರೆ ರಶ್ಯಕ್ಕೆ ನಮ್ಮ ಜೀವನದ ಮೇಲೆ ಆಸಕ್ತಿಯಿಲ್ಲ ಎಂದು ಮರಿಯುಪೋಲ್‌ನ ಅಝೋವ್ ರೆಜಿಮೆಂಟ್ನ ಗುಪ್ತಚರ ಅಧಿಕಾರಿ ಇಲ್ಯಾ ಸಮೊಯ್‌ಲೆಂಕೊ ಹೇಳಿದ್ದಾರೆ.

ನಮ್ಮಲ್ಲಿದ್ದ ಆಹಾರ ಧಾನ್ಯ, ನೀರು ಮತ್ತಿತರ ಅಗತ್ಯ ವಸ್ತುಗಳ ದಾಸ್ತಾನು ಮುಗಿದಿದೆ, ಪೂರೈಕೆಗೂ ತಡೆಯಾಗಿದೆ. ಆದರೆ ನಮ್ಮ ಬಳಿ ಶಸ್ತ್ರಾಸ್ತ್ರಗಳಿವೆ. ಆದ್ದರಿಂದ ಹೋರಾಟ ಮುಂದುವರಿಯಲಿದೆ. ಪರಿಸ್ಥಿತಿಗೆ ಉತ್ತಮ ರೀತಿಯ ಪರಿಹಾರ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ನಮ್ಮ ರೆಜಿಮೆಂಟಿನ ಸುಮಾರು 200 ಯೋಧರು ಗಾಯಗೊಂಡಿದ್ದಾರೆ, ಹಲವರು ಮೃತಪಟ್ಟಿದ್ದಾರೆ. ಮೃತ ಯೋಧರನ್ನು ಹಾಗೆಯೇ ಬಿಡುವಂತಿಲ್ಲ. ಅವರಿಗೆ ಗೌರವದ ವಿದಾಯ, ಗೌರವದ ಅಂತ್ಯಸಂಸ್ಕಾರ ನಡೆಸದೆ ನಾವು ಇಲ್ಲಿಂದ ನಿರ್ಗಮಿಸುವುದಿಲ್ಲ ಎಂದವರು ಹೇಳಿದ್ದಾರೆ.

 ಮರಿಯುಪೋಲ್‌ನ ಬಹುತೇಕ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ರಶ್ಯ ಹೇಳಿದೆ. ಅಲ್ಲಿನ ಅಝೊವ್‌ಸ್ತಲ್ ಸ್ಟೀಲ್ ಮಿಲ್‌ನ  ಒಳಗಡೆ ಉಕ್ರೇನ್‌ನ ಹಲವಾರು ನಾಗರಿಕರು ಹಾಗೂ ಯೋಧರು ಆಶ್ರಯ ಪಡೆದಿದ್ದು ಯೋಧರು ಅಲ್ಲಿಂದಲೇ ಹೋರಾಟ ಮುಂದುವರಿಸಿದ್ದಾರೆ. ಅಝೊವ್‌ಸ್ತಲ್ ಉಕ್ಕು ಸ್ಥಾವರದೊಳಗೆ ಸಿಲುಕಿರುವ ಎಲ್ಲಾ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲು ವಿಶ್ವಸಂಸ್ಥೆ ಮತ್ತು ರೆಡ್ಕ್ರಾಸ್ ಸಂಘಟಿತ ಉಪಕ್ರಮಕ್ಕೆ ಚಾಲನೆ ದೊರಕಿದ್ದು, ಅಲ್ಲಿಂದ ನಮ್ಮ ಜನರನ್ನು ಸುರಕ್ಷಿತವಾಗಿ ತೆರವುಗೊಳಿಸುವವರೆಗೆ ವಿರಮಿಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ಮಿಖಾಯ್ಲೆ ಪೊಡೊಲ್ಯಾಕ್ ರವಿವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News