ಶ್ರೀಲಂಕಾದಲ್ಲಿ ಮುಂದುವರಿದ ಪ್ರತಿಭಟನೆ: 41 ರಾಜಕಾರಣಿಗಳ ಮನೆಗೆ ಬೆಂಕಿ, ರಾಜಪಕ್ಸ ಮ್ಯೂಸಿಯಂ ಧ್ವಂಸ
ಕೊಲಂಬೊ, ಮೇ 10: ಶ್ರೀಲಂಕಾದಲ್ಲಿ ಕಳೆದ ಒಂದು ತಿಂಗಳಿಂದ ಶಾಂತರೀತಿಯಲ್ಲಿ ನಡೆಯುತ್ತಿದ್ದ ಸರಕಾರ ವಿರೋಧಿ ಪ್ರತಿಭಟನೆ ಸೋಮವಾರ ಹಿಂಸಾರೂಪಕ್ಕೆ ತಿರುಗಿದ್ದು ಹಿಂಸಾಚಾರದಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿದ್ದು 225ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈ ಮಧ್ಯೆ, ಆಡಳಿತಾರೂಢ ಮೈತ್ರಿಪಕ್ಷದ 41ಕ್ಕೂ ಅಧಿಕ ರಾಜಕೀಯ ಮುಖಂಡರ ಮನೆಗೆ ಬೆಂಕಿ ಹಚ್ಚಲಾಗಿದೆ. ಮನೆಗಳ ಎದುರು ನಿಲ್ಲಿಸಿದ್ದ ನೂರಾರು ವಾಹನಗಳೂ ಬೆಂಕಿಯಲ್ಲಿ ಸುಟ್ಟುಹೋಗಿವೆ. ಈ ಕಾರ್ಯವನ್ನು ನಾವು ಈ ಹಿಂದೆಯೇ ಮಾಡಿಲ್ಲವಲ್ಲಾ ಎಂಬ ವಿಷಾದವಿದೆ ಎಂದು ಬೆಂಕಿಯಲ್ಲಿ ಉರಿಯುತ್ತಿದ್ದ ಸಚಿವರ ಮನೆಯೆದುರು ನಿಂತಿದ್ದ ವ್ಯಕ್ತಿಯೊಬ್ಬ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅನುರಾಧಪುರ ಪಟ್ಟಣದಲ್ಲಿ ಅಧ್ಯಕ್ಷ ಗೊತಬಯ ರಾಜಪಕ್ಸರ ಕುಟುಂಬಕ್ಕೆ ಸೇರಿದ ಪೂರ್ವಜರ ಮನೆ ಮತ್ತು ಖಾಸಗಿ ದೇವಸ್ಥಾನ ಜ್ಞಾನ ಅಕ್ಕಾದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಲಾಗಿದೆ.
ರಾಜಪಕ್ಸ ಕುಟುಂಬದ ಪೂರ್ವಜರು ನೆಲೆಸಿದ್ದ ಮೆಡ ಮುಲಾನಾ ಗ್ರಾಮದಲ್ಲಿರುವ ಮ್ಯೂಸಿಯಂಗೆ ದಾಳಿ ನಡೆಸಿದ ತಂಡ ಅದನ್ನು ನೆಲಸಮಗೊಳಿಸಿದೆ . ಸಮೀಪದಲ್ಲಿದ್ದ ಪೂರ್ವಜರ ಮನೆಯೂ ಧ್ವಂಸವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಾಯವ್ಯ ಪ್ರಾಂತದ ನಗರ ಕುರುನೆಗಲದಲ್ಲಿ ರಾಜಪಕ್ಸ ಅವರ ರಾಜಕೀಯ ಕಚೇರಿಗೆ ನುಗ್ಗಿದ್ದ ಗುಂಪು ಕಚೇರಿಯನ್ನು ಧ್ವಂಸಮಾಡಿದೆ.
ಕೊಲಂಬೊದ ಟೆಂಪಲ್ ಟ್ರೀಸ್ ಪ್ರದೇಶದಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದ ಪ್ರಧಾನ ದ್ವಾರದ ಎದುರು ತಡೆಗೋಡೆಯಾಗಿ ನಿಲ್ಲಿಸಿದ್ದ ಟ್ರಕ್ಗೆ ಗುಂಪು ಬೆಂಕಿ ಹಚ್ಚಿದೆ. ಪ್ರಧಾನಿ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದ ಸಾವಿರಾರು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು. ಕೆಲವು ಅಶ್ರುವಾಯು ಸೆಲ್ ಸಮೀಪದಲ್ಲಿದ್ದ ಅಮೆರಿಕ ದೂತಾವಾಸದ ಆವರಣಕ್ಕೆ ಬಡಿಯಿತು. ಆದರೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಹಿಂದಾ ರಾಜಪಕ್ಸ ಪುತ್ರನ ನಿಕಟವರ್ತಿಗೆ ಸೇರಿದ್ದ ಹೋಟೆಲ್ಗೂ ಬೆಂಕಿ ಹಚ್ಚಲಾಗಿದ್ದು ಹೋಟೆಲ್ನ ಆವರಣದಲ್ಲಿ ನಿಲ್ಲಿಸಿದ್ದ ಲ್ಯಾಂಬೊರ್ಗಿನಿ ಕಾರು ಸುಟ್ಟುಹೋಗಿದೆ.
ಈ ಮಧ್ಯೆ, ಸರಕಾರ ವಿರೋಧಿ ಪ್ರತಿಭಟನಾಕಾರರೊಂದಿಗೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ರಾಜಪಕ್ಸ ಬೆಂಬಲಿಗರಿಗೆ ಚಿಕಿತ್ಸೆ ನೀಡಬಾರದು ಎಂದು ಜನರ ಗುಂಪೊಂದು ಕೊಲಂಬೊ ನ್ಯಾಷನಲ್ ಆಸ್ಪತ್ರೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ. ಅವರು ಕೊಲೆಗಡುಕರಾಗಿರಬಹುದು. ಆದರೆ ನಮಗೆ ಅವರೂ ಕೂಡಾ ರೋಗಿಗಳು ಎಂದು ವೈದ್ಯರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಬಳಿಕ ಸೇನೆಯ ಯೋಧರು ಪ್ರತಿಭಟನಾಕಾರರನ್ನು ಚದುರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ವರದಿಯಾಗಿದೆ.
ಸರಕಾರ ವಿರೋಧಿ ಪ್ರತಿಭಟನಾಕಾರರು ತಮ್ಮ ಮೇಲೆ ಹಲ್ಲೆಗೆ ಮುಂದಾದ ಹಲವರನ್ನು ಸಮೀಪದಲ್ಲಿದ್ದ ಕೆರೆಗೆ ತಳ್ಳಿದ್ದು ಬಳಿಕ ಪೊಲೀಸರು ಅವರನ್ನು ರಕ್ಷಿಸಿದರು. ರಾಜಪಕ್ಸ ಬೆಂಬಲಿಗರಿಗೆ ಸೇರಿದ ಹಲವು ಬಸ್ಸು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮಹಾರಾಗಮ ನಗರದಲ್ಲಿ ಸರಕಾರದ ಪರ ಗುಂಪಿನ ಮುಖಂಡ ಪ್ರಯಾಣಿಸುತ್ತಿದ್ದ ಬಸ್ಸನ್ನು ಅಡ್ಡಗಟ್ಟಿದ ಪ್ರತಿಭಟನಾಕಾರರು ಆತನನ್ನು ಬಸ್ಸಿನಿಂದ ಹೊರಗೆಳೆದು ಕಸ ಸಾಗಿಸುತ್ತಿದ್ದ ವ್ಯಾನ್ಗೆ ಎಸೆದರು. ಬಳಿಕ ಬುಲ್ಡೋಜರ್ ಬಳಸಿ ಬಸ್ಸನ್ನು ಪುಡಿ ಮಾಡಿದರು ಎಂದು ವರದಿಯಾಗಿದೆ.